ಭಾರತೀಯರಿಗೆ ವೀಸಾ ನಿರ್ಬಂಧ ವಿಸ್ತರಿಸಿದ ಬಾಂಗ್ಲಾದೇಶ

ಸಾಂದರ್ಭಿಕ ಚಿತ್ರ | hindustantimes
ಢಾಕಾ, ಜ.8: ಬಾಂಗ್ಲಾದೇಶ ಭಾರತೀಯ ಪ್ರಜೆಗಳಿಗೆ ವೀಸಾ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿದೆ. ಗುರುವಾರದಿಂದ ವೀಸಾ ಅಮಾನತು ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿರುವ ಬಾಂಗ್ಲಾದ ಉಪ ಹೈಕಮಿಷನ್ಗಳಿಗೆ ವಿಸ್ತರಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಭದ್ರತಾ ಸ್ಥಿತಿಗಳ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಭಾರತವು ಬಾಂಗ್ಲಾದ ಖುಲ್ನಾ ಮತ್ತು ರಾಜ್ಶಾಹಿ ನಗರದಲ್ಲಿನ ಎರಡು ವೀಸಾ ಅರ್ಜಿ ಕೇಂದ್ರಗಳನ್ನು ಮುಚ್ಚಿತ್ತು. ಅದರ ಮರುದಿನವೇ ಬಾಂಗ್ಲಾದೇಶದ ಹೈಕಮಿಷನ್ ಹೊಸದಿಲ್ಲಿಯಲ್ಲಿ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಇದೀಗ ಈ ಕ್ರಮವನ್ನು ಕೋಲ್ಕತಾ, ಮುಂಬೈ ಮತ್ತು ಚೆನ್ನೈ ನಗರಗಳಿಗೆ ವಿಸ್ತರಿಸಲಾಗಿದೆ. ಹೊಸ ಕ್ರಮಗಳ ಅಡಿಯಲ್ಲಿ ವ್ಯಾಪಾರ ಮತ್ತು ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಎಲ್ಲಾ ವೀಸಾ ವಿಭಾಗಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ಹೇಳಿದೆ.





