Bangladesh | ಹಸೀನಾ ಪಲಾಯನದ ವಿಡಿಯೊ ಹಂಚಿಕೊಂಡಿದ್ದ ವಾಯುಪಡೆಯ ಮಾಜಿ ಅಧಿಕಾರಿ ನಿಗೂಢವಾಗಿ ಮೃತ್ಯು

Photo credit : ndtv
ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿದ್ದ ದೃಶ್ಯಗಳ ವಿಡಿಯೊ ಹಂಚಿಕೊಂಡಿದ್ದ ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿ ಕೆ.ಎಂ. ತಹ್ಸಿಫ್ ಸೌರಿ (28) ನಿಗೂಢವಾಗಿ ಮೃತಪಟ್ಟಿದ್ದಾರೆ. ಅಕ್ಟೋಬರ್ 28ರಂದು ಅವರ ಮೃತದೇಹ ತುರಾಗ್ ನದಿಯಲ್ಲಿ ಪತ್ತೆಯಾಗಿದ್ದು, ಹಸೀನಾ ಅವರ ಪಲಾಯನದ ವಿಡಿಯೊ ಹಂಚಿಕೊಂಡಿದ್ದಕ್ಕಾಗಿ ನಿರಂತರ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಢಾಕಾದ ಉತ್ತರ್ಖಾನ್ ಪ್ರದೇಶದ ರಾಜಬಾರಿ ಘಾಟ್ ಬಳಿ ರಾಷ್ಟ್ರೀಯ ತುರ್ತು ಸಹಾಯವಾಣಿಗೆ ಬಂದ ಕರೆಯ ಮೇರೆಗೆ ನದಿ ಪೊಲೀಸರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಆರಂಭದಲ್ಲಿ ಗುರುತು ಪತ್ತೆಯಾಗದ ಮೃತದೇಹವನ್ನು ಜೇಬಿನಲ್ಲಿದ್ದ ಐಫೋನ್ ಮೂಲಕ ಗುರುತಿಸಲಾಗಿದೆ. ಅವರ ಬಳಿ ಕೈಗಡಿಯಾರವೂ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಢಾಕಾದ ಶಹೀದ್ ಸುಹ್ರವರ್ದಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ವಾಯುಪಡೆಯ ಮಾಜಿ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ತಹ್ಸಿಫ್ ಅಕ್ಟೋಬರ್ 27ರಂದು ತಾಯಿಯೊಂದಿಗೆ ಶಾಪಿಂಗ್ ಗೆ ತೆರಳಿದ್ದರು. ಸಂಜೆ ಆಪ್ತ ಸ್ನೇಹಿತನೊಬ್ಬ ಕರೆ ಮಾಡಿದ ಹಿನ್ನೆಲೆಯಲ್ಲಿ ಆತನೊಂದಿಗೆ ಹೊರಗೆ ಹೋಗಿದ್ದರು. ಆ ಬಳಿಕ ಕುಟುಂಬದವರು ಹಲವು ಬಾರಿ ಕರೆ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಅಂದು ರಾತ್ರಿ ಸುಮಾರು 1.35ಕ್ಕೆ ತಾಯಿಗೆ ಸಂದೇಶ ಕಳುಹಿಸಿದ್ದ ತಹ್ಸಿಫ್, ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ, ಅವರು ಮನೆಗೆ ಮರಳಲಿಲ್ಲ. ಮರುದಿನ ಅವರ ಮೃತದೇಹ ನದಿಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ತಮ್ಮ ಮಗನ ಮೃತದೇಹ ಪತ್ತೆಯಾದ ಸ್ಥಳಕ್ಕೆ ಹೋಗಲು ಆತನಿಗೆ ಯಾವುದೇ ಕಾರಣವಿರಲಿಲ್ಲ ಎಂದು ತಂದೆ ಎನಾಯೆತುಲ್ ಕರೀಮ್ ತಿಳಿಸಿದ್ದಾರೆ. ತಹ್ಸಿಫ್ ಅವರೊಂದಿಗೆ ತೆರಳಿದ್ದ ಸ್ನೇಹಿತ, ಮಂಗಳವಾರ ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದಾಗಿ ಕುಟುಂಬದವರಿಗೆ ತಿಳಿಸಿದ್ದಾನೆ. ಬಳಿಕ ತಹ್ಸಿಫ್ ಅವರನ್ನು ಮನೆಯ ಬಳಿ ಬಿಟ್ಟು ತಾನು ಮನೆಗೆ ತೆರಳಿದ್ದಾಗಿ ಹೇಳಿದ್ದಾನೆ.
ವಿಡಿಯೊ ಹಂಚಿಕೊಂಡಿದ್ದಕ್ಕೆ ಕಿರುಕುಳ? :
ತಹ್ಸಿಫ್ ಅವರ ಸಂಬಂಧಿ ಮೊಶ್ಫೆಕಾ ಜಹಾನ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಸಹೋದರನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
'ನನ್ನ ಸಹೋದರನನ್ನು ಕೊಲೆ ಮಾಡಲಾಗಿದೆ. ಅವನ ತಪ್ಪೇನು? ಹಸೀನಾ ದೇಶದಿಂದ ಪಲಾಯನ ಮಾಡುತ್ತಿದ್ದ ವಿಡಿಯೊವನ್ನು ಹಂಚಿಕೊಂಡಿದ್ದೇ? ಆ ವಿಡಿಯೊವನ್ನು ಅವನು ಸ್ವತಃ ಚಿತ್ರೀಕರಿಸಿರಲಿಲ್ಲ. ಒಬ್ಬ ಸಾಮಾನ್ಯ ನಾಗರಿಕನಾಗಿ ಅದನ್ನು ಹಂಚಿಕೊಂಡಿದ್ದ ಅಷ್ಟೇ. ಆತನ ಸಹೋದ್ಯೋಗಿಯೊಬ್ಬರು ವಿಡಿಯೊ ಚಿತ್ರೀಕರಿಸಿದ್ದರು' ಎಂದು ಅವರು ಬರೆದಿದ್ದಾರೆ.
ವಿಡಿಯೊ ಹಂಚಿಕೊಂಡಿದ್ದಕ್ಕಾಗಿ ತಹ್ಸಿಫ್ ನಿರಂತರ ಕಿರುಕುಳ ಎದುರಿಸಿದ್ದರು. ಅವರನ್ನು ಬಲವಂತವಾಗಿ ನಿವೃತ್ತಿಗೊಳಿಸಲಾಗಿತ್ತು. ಪ್ರತಿದಿನ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಆದರೂ ಕಿರುಕುಳ ನಿಲ್ಲಲಿಲ್ಲ. ಕೊನೆಗೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಜಹಾನ್ ಆರೋಪಿಸಿದ್ದಾರೆ.
'ರಾ' ಪರ ಬೇಹುಗಾರಿಕೆ ಆರೋಪ :
ತಹ್ಸಿಫ್ ವಿರುದ್ಧ ಈ ಹಿಂದೆ ಭಾರತದ ಗುಪ್ತಚರ ಸಂಸ್ಥೆ 'ರಾ' (R&AW) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ಕಳೆದ ವರ್ಷ ಆಗಸ್ಟ್ನಲ್ಲಿ ಜಮಾತ್-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ 'ಅಮರ್ ದೇಶ್' ಪತ್ರಿಕೆಯು ಈ ಕುರಿತು ವರದಿ ಪ್ರಕಟಿಸಿತ್ತು. ವರದಿಯ ಬಳಿಕ ಸರಕಾರವು ತಹ್ಸಿಫ್ ಅವರ ಪಾಸ್ಪೋರ್ಟ್ ಅನ್ನು ಎರಡು ವರ್ಷಗಳ ಅವಧಿಗೆ ಮುಟ್ಟುಗೋಲು ಹಾಕಿಕೊಂಡಿತ್ತು. ಆದರೆ, ಈ ಆರೋಪ ಸುಳ್ಳು ಎಂದು ಹೇಳಲಾಗಿತ್ತು.
ಕೆಲವು ತಿಂಗಳ ಹಿಂದೆ 'ಸ್ಪೀಕ್ ವಿತ್ ರಶೀದ್' ಎಂಬ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ತಹ್ಸಿಫ್, ತಮ್ಮ ವಿರುದ್ಧ ವರದಿ ಪ್ರಕಟಿಸಿದ್ದ ಪತ್ರಿಕೆಯ ವಿರುದ್ಧ ಬಹಿರಂಗವಾಗಿಯೇ ಮಾತನಾಡಿದ್ದರು. ಈ ಕುರಿತು ಇನ್ನಷ್ಟು ವಿಷಯಗಳನ್ನು ಬಹಿರಂಗಪಡಿಸುವ ಸುಳಿವು ನೀಡಿದ್ದರೂ, ಕೊನೆಗೆ ಅವುಗಳನ್ನು ಹೇಳದಿರಲು ನಿರ್ಧರಿಸಿದ್ದರು.
ಪಾಡ್ಕಾಸ್ಟ್ನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗದ ಮಾತು :
ಜುಲೈ 21ರಂದು 'ಸ್ಪೀಕ್ ವಿತ್ ರಶೀದ್' ಚಾನೆಲ್ 'ಮೈಲ್ಸ್ಟೋನ್ ಟ್ರ್ಯಾಜೆಡಿ: ಇನ್ಸೈಡ್ ದಿ ಬಾಂಗ್ಲಾದೇಶ ಏರ್ ಫೋರ್ಸ್' ಶೀರ್ಷಿಕೆಯ ಪಾಡ್ಕಾಸ್ಟ್ ಬಿಡುಗಡೆ ಮಾಡಿತ್ತು. ಬಾಂಗ್ಲಾದೇಶದ ಮೈಲ್ಸ್ಟೋನ್ ದುರಂತದ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ನಿರೂಪಕರು ಕೇಳಿದ ಪ್ರಶ್ನೆಗಳಿಗೆ ತಹ್ಸಿಫ್ ಉತ್ತರಿಸಿದ್ದರು. ಹಸೀನಾ ದೇಶ ತೊರೆಯುತ್ತಿದ್ದ ದೃಶ್ಯಗಳ ಸೋರಿಕೆಯಾದ ವಿಡಿಯೊ ಬಗ್ಗೆಯೂ ಮಾತನಾಡಿದ್ದರು.
'ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಮೇಲೆ ಏರಲು ಬಯಸುವವರು ಮತ್ತು ಮೇಲೆ ಏರಲು ಸಾಧ್ಯವಾದವರು. ನೀವು ಎರಡನೇ ವರ್ಗಕ್ಕೆ ಸೇರಿದವರಾಗಿದ್ದರೆ ಅದೃಷ್ಟವಂತರು ಎಂದು ಭಾವಿಸಬಹುದು. ಉದಾತ್ತ ಉದ್ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದಕ್ಕಿಂತ ದೊಡ್ಡ ಹೆಮ್ಮೆ ಮತ್ತೊಂದಿಲ್ಲ. ದೇಶಕ್ಕಾಗಿ ಪ್ರಾಣ ನೀಡುವುದಕ್ಕಿಂತ ದೊಡ್ಡ ಉದ್ದೇಶವೂ ಇಲ್ಲ' ಎಂದು ಅವರು ಹೇಳಿದ್ದರು.
2024ರ ಆಗಸ್ಟ್ 5ರಂದು ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಅವರ ಸರಕಾರ ಪತನಗೊಂಡಿತ್ತು. ಬಳಿಕ ಅವರು ಮಿಲಿಟರಿ ಹೆಲಿಕಾಪ್ಟರ್ನಲ್ಲಿ ದೇಶ ತೊರೆದು ಭಾರತಕ್ಕೆ ಬಂದಿದ್ದರು.






