`ದೇಶಭ್ರಷ್ಟ' ಹಸೀನಾರ ಹೇಳಿಕೆ ಪ್ರಕಟಿಸದಂತೆ ಮಾಧ್ಯಮಗಳಿಗೆ ಬಾಂಗ್ಲಾ ಸರಕಾರ ಎಚ್ಚರಿಕೆ

ಶೇಖ್ ಹಸೀನಾ | Photo Credit : PTI
ಢಾಕ, ನ.18: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ನೀಡಿರುವ ಹೇಳಿಕೆಗಳನ್ನು ಪ್ರಕಟಿಸದಂತೆ ಬಾಂಗ್ಲಾದೇಶದ ಮಧ್ಯಂತರ ಸರಕಾರ ಎಲ್ಲಾ ಮುದ್ರಣ, ಇಲೆಕ್ಟ್ರಾನಿಕ್ ಮತ್ತು ಆನ್ಲೈನ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.
ಹಸೀನಾ ನೀಡುವ ಹೇಳಿಕೆಗಳು `ಹಿಂಸಾಚಾರ, ಅವ್ಯವಸ್ಥೆ ಮತ್ತು ಅಪರಾಧ ಚಟುವಟಿಕೆಗಳನ್ನು ಪ್ರಚೋದಿಸುವ ನಿರ್ದೇಶನಗಳು ಅಥವಾ ಕರೆಗಳನ್ನು ಹೊಂದಿರಬಹುದು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರಬಹುದು ಎಂದು ರಾಷ್ಟ್ರೀಯ ಸೈಬರ್ ಭದ್ರತಾ ಏಜೆನ್ಸಿ(ಎನ್ಸಿಎಸ್ಎ)ಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
`ಅಪರಾಧಿ ಮತ್ತು ದೇಶಭ್ರಷ್ಟ' ಹಸೀನಾ ನೀಡುವ ಹೇಳಿಕೆಗಳನ್ನು ಪ್ರಕಟಿಸುವ ಮತ್ತು ಪ್ರಸಾರ ಮಾಡುವ ಮಾಧ್ಯಮ ಸಂಸ್ಥೆಗಳ ಬಗ್ಗೆ ಎನ್ಸಿಎಸ್ಎ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅಪರಾಧಿಗಳು ಮತ್ತು ದೇಶಭ್ರಷ್ಟರ ಹೇಳಿಕೆಗಳನ್ನು ಪ್ರಕಟಿಸುವುದು ಸೈಬರ್ ಭದ್ರತೆ ಶಾಸನದ ಅಂಶಗಳನ್ನು ಉಲ್ಲಂಘಿಸುತ್ತದೆ. ರಾಷ್ಟ್ರೀಯ ಸಮಗ್ರತೆ, ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ, ಜನಾಂಗೀಯ ಅಥವಾ ಧಾರ್ಮಿಕ ದ್ವೇಷಗಳನ್ನು ಉತ್ತೇಜಿಸುವ, ಅಥವಾ ನೇರವಾಗಿ ಹಿಂಸೆಯನ್ನು ಉತ್ತೇಜಿಸುವ ಯಾವುದೇ ವಿಷಯಗಳನ್ನು ತೆಗೆದು ಹಾಕಲು ಅಥವಾ ನಿರ್ಬಂಧಿಸಲು ಅಧಿಕಾರಿಗಳಿಗೆ ಅಧಿಕಾರವಿದೆ' ಎಂದು ಎನ್ಸಿಎಸ್ಎ ಹೇಳಿದೆ.







