Bangladesh | ಭಾರತದ ಏರ್ ಆ್ಯಂಬುಲೆನ್ಸ್ ತುರ್ತು ಭೂಸ್ಪರ್ಶ, ರೋಗಿ ಮೃತ್ಯು

Photo credit : rediff
ಢಾಕಾ, ಅ.19: ಏರ್ ಆಂಬ್ಯುಲೆನ್ಸ್ ವೊಂದು ರವಿವಾರ ಬಾಂಗ್ಲಾದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಅದರಲ್ಲಿದ್ದ ಭಾರತೀಯ ಮಹಿಳೆಯೊಬ್ಬರು ಬಳಿಕ ಮೃತಪಟ್ಟಿದ್ದಾರೆ. ವಿಮಾನದಲ್ಲಿ ತಾಂತ್ರಿಕ ದೋಷವುಂಟಾಗಿ ಬಾಗಿಲು ಆಗಸದಲ್ಲಿಯೇ ಅರ್ಧ ತೆರೆದುಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಅನಿವಾರ್ಯವಾಗಿತ್ತು.
ಬೀಚ್ಕ್ರಾಫ್ಟ್ ಕಿಂಗ್ ಏರ್ ಸಿ90ಎ ವಿಮಾನವು ಅಗರ್ತಲಾದಿಂದ ಕೋಲ್ಕತ್ತಾಗೆ ಹಾರಾಟ ನಡೆಸುತ್ತಿತ್ತು. ವಿಮಾನವು 12,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇಬ್ಬರು ಪೈಲಟ್ ಗಳು, ರೋಗಿ, ವೈದ್ಯರು, ಪ್ಯಾರಾಮೆಡಿಕ್ ಮತ್ತು ಇಬ್ಬರು ಸಹಾಯಕರು ಸೇರಿದಂತೆ ಒಟ್ಟು ಏಳು ಜನರನ್ನು ಹೊತ್ತಿದ್ದ ವಿಮಾನವು ಅಪರಾಹ್ನ 1.40ರ ಸುಮಾರಿಗೆ ಢಾಕಾದ ಹಜರತ್ ಶಾಹ್ಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿತ್ತು.
ರೋಗಿ ಅಂಜನಾ ಭೌಮಿಕ್ (56) ಅವರನ್ನು ತಕ್ಷಣವೇ ಕುರ್ಮಿಟೋಲಾ ಮಲ್ಟಿಕೇರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ವಿಮಾನದಲ್ಲಿದ್ದ ಇತರ ಎಲ್ಲರೂ ಸುರಕ್ಷಿತವಾಗಿದ್ದಾರೆ. ರೋಗಿಯ ಸಾವಿಗೆ ವಿಮಾನದ ತಾಂತ್ರಿಕ ದೋಷವೇ ಕಾರಣವೇ ಅಥವಾ ಇತರ ಆರೋಗ್ಯ ಸಮಸ್ಯೆಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಂತರರಾಷ್ಟ್ರೀಯ ವಿಮಾನಗಳು ಇಳಿಯಲು ಅಗತ್ಯವಾದ ಪೂರ್ವಾನುಮತಿ ಇಲ್ಲದಿದ್ದರೂ ಬಾಂಗ್ಲಾದೇಶದ ಅಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ಏರ್ ಆಂಬ್ಯುಲೆನ್ಸ್ಗೆ ನೆರವಾಗಿದ್ದರು ಎಂದು ಸರಕಾರಿ ಸ್ವಾಮ್ಯದ ಬಿಎಸ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಗತ್ಯ ರಾಜತಾಂತ್ರಿಕ ಔಪಚಾರಿಕತೆಗಳನ್ನು ಪೂರೈಸಲು ನೆರವಾಗಿತ್ತು. ಭಾರತದ ಎಸ್ಕೆಬಿ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಈ ವಿಮಾನವು ಅನುಮತಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸದ್ಯ ಢಾಕಾ ವಿಮಾನ ನಿಲ್ದಾಣದಲ್ಲೇ ಉಳಿದಿದೆ.






