ಬಾಂಗ್ಲಾದೇಶ | ರಾಯಭಾರ ಕಚೇರಿಯಲ್ಲಿ ಭಾರತೀಯ ಅಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Photo: x.com/abplive
ಢಾಕಾ: ಬಾಂಗ್ಲಾದೇಶದ ಚಿತ್ತೋಗ್ರಾಮದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಸಹಾಯಕ ಶಿಷ್ಟಾಚಾರ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದ ನರೇನ್ ಧರ್ ಅವರು ಮಂಗಳವಾರ ಕಚೇರಿ ಆವರಣದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಭಾರತೀಯ ಹೈಕಮಿಷನ್ ಕಚೇರಿಯ ಹಳೆಯ ವೀಸಾ ಸೆಂಟರ್ ನ ಎರಡನೇ ಮಹಡಿಯ ಬಾತ್ ರೂಂ ನಲ್ಲಿ ಮಂಗಳವಾರ ಮುಂಜಾನೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. "ಅವರು ನರೇನ್ ಧರ್ ಎಂದು ಹೇಳಲಾಗಿದ್ದು, ಮಿಷನ್ ನಲ್ಲಿ ಸಹಾಯಕ ಶಿಷ್ಟಾಚಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದುದು ತಿಳಿದುಬಂದಿದೆ" ಎಂದು ನಗರದ ಪೊಲೀಸ್ ವಕ್ತಾರ ಅಮೀನುರ್ರಶೀದ್ ಸುದ್ದಿಗಾರರಿಗೆ ತಿಳಿಸಿದರು.
ಧರ್ ಹೃದಯಾಘಾತದಿಂದ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಅವರ ಸಾವಿನ ಕಾರಣವನ್ನು ದೃಢಪಡಿಸಲಿದೆ ಎಂದು ನಗರದ ಸಹಾಯಕ ಪೊಲೀಸ್ ಆಯುಕ್ತರೂ ಆಗಿರುವ ರಶೀದ್ ಸ್ಪಷ್ಟಪಡಿಸಿದರು.
ಘಟನೆ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸರ್ಕಾರಿ ಸ್ವಾಮ್ಯದ ಚಿತ್ತೋಗ್ರಾಮ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಒಯ್ಯಲಾಗಿದೆ. ಅವರು ಹೈಕಮಿಷನ್ ನಲ್ಲಿ ಸೇವೆಯಲ್ಲಿದ್ದ ವಿದೇಶಿ ಪ್ರಜೆಯಾಗಿದ್ದರಿಂದ ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ ಎಂದು ವಿವರಿಸಿದರು.
ಪೊಲೀಸ್ ಮಾಹಿತಿಯ ಪ್ರಕಾರ ಧರ್ ಪಂಜಾಬ್ ನ ಚಂಡೀಗಢ ಮೂಲದವರು. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಅಥವಾ ಚಿತ್ತೋಗ್ರಾಮ ಸಹಾಯಕ ಹೈಕಮಿಷನ್ ಈ ಸಾವಿನ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಘಟನೆ ಬಗ್ಗೆ ಪ್ರತಿಕ್ರಿಯಿಸಿಲ್ಲ.






