ಬಾಂಗ್ಲಾದೇಶ | ಉಸ್ಮಾನ್ ಹಾದಿ ಹತ್ಯೆ: ವಿಚಾರಣೆಗೆ 24 ದಿನಗಳ ಗಡುವು; ವರದಿ

ಷರೀಫ್ ಉಸ್ಮಾನ್ ಹಾದಿ | Photo Credit : X \ @thewirepak
ಢಾಕಾ, ಡಿ.29: ಇಂಕ್ವಿಲಾಬ್ ಮೊಂಚೊ' ಪಕ್ಷದ ನಾಯಕ ಉಸ್ಮಾನ್ ಹಾದಿ ಹತ್ಯೆ ಕುರಿತ ವಿಚಾರಣೆಯನ್ನು 24 ದಿನಗಳ ಒಳಗೆ ಪೂರ್ಣಗೊಳಿಸಿ ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರಕ್ಕೆ ಗಡುವು ವಿಧಿಸಲಾಗಿದೆ.
ಚುನಾವಣಾ ಪ್ರಚಾರದ ಸಂದರ್ಭ ಗುಂಡೇಟಿನಿಂದ ಗಾಯಗೊಂಡಿದ್ದ ಹಾದಿ ಡಿಸೆಂಬರ್ 18ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. `ಹಂತಕ, ಷಡ್ಯಂತ್ರ ರೂಪಿಸಿದವರು, ಸಹಚರರು, ಪರಾರಿಯಾಗಲು ಸಹಕರಿಸಿದವರು, ಆಶ್ರಯ ನೀಡಿದವರು ಸೇರಿದಂತೆ ಸಂಪೂರ್ಣ ಕೊಲೆ ಪ್ರಕರಣದ ತನಿಖೆಯನ್ನು ಮುಂದಿನ 24 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಮಧ್ಯಂತರ ಸರಕಾರಕ್ಕೆ ಗಡುವು ನೀಡಿದ್ದೇವೆ' ಎಂದು ಪಕ್ಷದ ಸದಸ್ಯ ಕಾರ್ಯದರ್ಶಿ ಅಬ್ದುಲ್ಲ ಅಲ್ ಜಬೆರ್ರನ್ನು ಉಲ್ಲೇಖಿಸಿ `ದಿ ಡೈಲಿ ಸ್ಟಾರ್' ವರದಿ ಮಾಡಿದೆ.
ಬಾಂಗ್ಲಾದೇಶ ಚುನಾವಣೆ: ನಾಮಪತ್ರ ಸಲ್ಲಿಸಿದ ತಾರಿಕ್ ರಹ್ಮಾನ್
ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ)ಯ ಹಂಗಾಮಿ ಅಧ್ಯಕ್ಷ ತಾರಿಕ್ ರಹ್ಮಾನ್ ಮುಂಬರುವ ರಾಷ್ಟ್ರೀಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿರುವುದಾಗಿ `ಡೈಲಿ ಸ್ಟಾರ್' ವರದಿ ಮಾಡಿದೆ.
2026ರ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ತಾರಿಕ್ ಅನ್ವರ್ ಢಾಕಾ-17 ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ತಾರಿಕ್ ರಹ್ಮಾನ್ ಪರವಾಗಿ ಢಾಕಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಎನ್ಪಿ ಅಧ್ಯಕ್ಷರ ಸಲಹೆಗಾರ ಅಬ್ದುಸ್ ಸಲಾಮ್ ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ತಾರಿಕ್ ಢಾಕಾ-17 ಕ್ಷೇತ್ರದ ಮತದಾರರಾಗಿ ನೋಂದಾಯಿಸಿಕೊಂಡಿದ್ದರು ಎಂದು ವರದಿ ಹೇಳಿದೆ.







