ಶೇಖ್ ಹಸೀನಾ ಆಡಳಿತದ ಪ್ರಮಾದಗಳನ್ನು ಮಧ್ಯಂತರ ಸರಕಾರ ಪುನರಾವರ್ತಿಸುತ್ತಿದೆ: ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆ ಆರೋಪ
"ವಿರೋಧಿಗಳನ್ನು ದಮನಿಸಲು ಸರಕಾರಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿರುವ ಯೂನುಸ್ ಆಡಳಿತ"

ಮುಹಮ್ಮದ್ ಯೂನುಸ್ | PC | INDIAN EXPRESS
ಢಾಕ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದಲ್ಲಿ ಕಂಡಂತೆಯೇ ಬಾಂಗ್ಲಾದ ಹಾಲಿ ಮಧ್ಯಂತರ ಸರಕಾರದಲ್ಲಿಯೂ ಪತ್ರಕರ್ತರ ವಿರುದ್ಧ ದೌರ್ಜನ್ಯ ಹಾಗೂ ಯದ್ವಾತದ್ವಾ ಬಂಧನಗಳು ಮುಂದುವರಿದಿದೆಯೆಂದು ಮಾನವ ಹಕ್ಕುಗಳ ಕಣ್ಗಾವಲು ಸಮಿತಿ ಮಂಗಳವಾರ ಎಚ್ಚರಿಕೆ ನೀಡಿದೆ.
ಬಾಂಗ್ಲಾದಲ್ಲಿ ಕಳೆದ ವರ್ಷದ ಆಗಸ್ಟ್ನಲ್ಲಿ ನೂರಾರು ಮಂದಿಯ ಜೀವಗಳನ್ನು ಬಲಿತೆಗೆದುಕೊಂಡ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬಂಡಾಯವು ಶೇಖ್ ಹಸೀನಾ ಅವರ ಹದಿನೈದು ವರ್ಷಗಳ ಸುದೀರ್ಘ ಅಳ್ವಿಕೆಯನ್ನು ಅಂತ್ಯಗೊಳಿಸಿತ್ತು.
ಆನಂತರ ಅಧಿಕಾರಕ್ಕೇರಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಸಂಸ್ಥೆಗಳನ್ನು ಸುಧಾರಣೆಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆಯಾದರೂ, ಅವುಗಳನ್ನು ಹಸೀನಾರ ಅವಾಮಿ ಲೀಗ್ ಪಕ್ಷದ ವಿರೋಧಿಗಳನ್ನು ಶಿಕ್ಷಿಸುವ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿದೆಯೆಂದು ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆ ತಿಳಿಸಿದೆ.
ಹಿಂದಿನ ಸರಕಾರದಲ್ಲಿದ್ದಂತೆಯೇ, ಹಾಲಿ ಸರಕಾರದ ಆಡಳಿತದಲ್ಲೂ ಪೊಲೀಸರು ದಮನಕಾರಿ ನೀತಿಗಳನ್ನು ಮುಂದುವರಿಸಿದ್ದಾರೆ. ಹಸೀನಾರ ಬೆಂಬಲಿಗರನ್ನು ಗುರಿಯಿರಿಸಿರುವ ಅವರು ಕಳೆದ ಎರಡು ತಿಂಗಳುಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿಯ ವಿರುದ್ಧ ದೋಷಾರೋಪಗಳನ್ನು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಒಂದು ವೇಳೆ ಮಧ್ಯಂತರ ಸರಕಾರವು ಕ್ಷಿಪ್ರ ಹಾಗೂ ಸಂರಚನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸದೆ ಇದ್ದಲ್ಲಿ ಬಾಂಗ್ಲಾದೇಶವು ಕಷ್ಟಪಟ್ಟು ಸಂಪಾದಿಸಿರುವ ಅಭಿವೃದ್ಧಿಯು ನಷ್ಟವಾಗಲಿದೆ ಎಂದು ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆಯ ಏಶ್ಯ ವಿಭಾಗದ ನಿರ್ದೇಶಕ ಎಲೈನ್ ಪಿಯರ್ಸನ್ ಎಚ್ಚರಿಕೆ ನೀಡಿದ್ದಾರೆ.
ಹಸೀನಾ ಸರಕಾರವನ್ನು ಬೆಂಬಲಿಸಿದ್ದರೆನ್ನಲಾದ ಪತ್ರಕರ್ತರ ವಿರುದ್ಧ ಮಧ್ಯಂತರ ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆಯೆಂದು ವರದಿ ತಿಳಿಸಿದೆ.
ಕಳೆದ ಬೇಸಿಗೆಯಲ್ಲಿ ಪ್ರತಿಭಟನಕಾರರ ಮೇಲೆ ಹಸೀನಾ ಸರಕಾರದ ದಮನಕಾರ್ಯಾಚರಣೆಯನ್ನು ಬೆಂಬಲಿಸಿದ್ದ ಕನಿಷ್ಠ 140 ಪ್ರತಿಭಟನಕಾರರ ವಿರುದ್ಧ ನವೆಂಬರ್ನಲ್ಲಿ ಕೊಲೆ ಆರೋಪ ದಾಖಲಿಸಲಾಗಿತ್ತು. ಆದಾಗ್ಯೂ ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆಯ ಈವರದಿ ಬಗ್ಗೆ ಯೂನುಸ್ ಸರಕಾರವು ಇನ್ನೂ ಕೂಡಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ.







