ಮಧ್ಯಪ್ರಾಚ್ಯ ಸಂಘರ್ಷದಿಂದ ಇಂಧನ ಬಿಕ್ಕಟ್ಟು: ಬಾಂಗ್ಲಾದೇಶದಲ್ಲಿ ವಿಶ್ವವಿದ್ಯಾಲಯಗಳು ಬಂದ್, ಇಂಧನ ಮಾರಾಟದ ಮೇಲೂ ಮಿತಿ

ಸಾಂದರ್ಭಿಕ ಚಿತ್ರ (AI)
ಢಾಕಾ : ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಉದ್ಭವಿಸಿರುವ ಇಂಧನ ಬಿಕ್ಕಟ್ಟಿನ ಮಧ್ಯೆ ಬಾಂಗ್ಲಾದೇಶವು ವಿದ್ಯುತ್ ಉಳಿಸಲು ವಿಶ್ವವಿದ್ಯಾನಿಲಯಗಳನ್ನು ಮುಚ್ಚಿದೆ ಮತ್ತು ಇಂಧನ ಮಾರಾಟದ ಮೇಲೂ ಮಿತಿಯನ್ನು ವಿಧಿಸಿದೆ ಎಂದು ವರದಿಯಾಗಿದೆ.
ವಿದ್ಯುತ್ ಮತ್ತು ಇಂಧನವನ್ನು ಸಂರಕ್ಷಿಸುವ ತುರ್ತು ಕ್ರಮಗಳ ಭಾಗವಾಗಿ ಈದ್ ಉಲ್-ಫಿತ್ರ್ ಹಬ್ಬದ ರಜಾದಿನಗಳನ್ನು ಮುಂಚಿತವಾಗಿ ಘೋಷಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ಕ್ರಮವು ವಿದ್ಯುತ್ ಬಳಕೆಯನ್ನು ಮಾತ್ರವಲ್ಲದೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಇದರಿಂದ ಇಂಧನ ವ್ಯರ್ಥವಾಗುವುದು ಕೂಡ ಕಡಿಮೆಯಾಗಲಿದೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳು, ವಸತಿ ನಿಲಯಗಳು, ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ಹವಾನಿಯಂತ್ರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತದೆ. ವಿಶ್ವವಿದ್ಯಾಲಯಗಳನ್ನು ಮುಂಚಿತವಾಗಿ ಮುಚ್ಚುವುದರಿಂದ ವಿದ್ಯುತ್ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಪರಿಗಣಿಸಿ ವಿದ್ಯುತ್ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಾಂಗ್ಲಾದೇಶದ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಕಳುಹಿಸಿದ ನಿರ್ದೇಶನದಲ್ಲಿ ತಿಳಿಸಿದೆ.
ಬಾಂಗ್ಲಾದೇಶದ ಇಂಧನ ಅಗತ್ಯಗಳ ಸುಮಾರು 95 ಶೇಕಡಾವರೆಗೆ ಆಮದುಗಳ ಮೇಲೆ ಅವಲಂಬಿತವಾಗಿದೆ. ಆತಂಕದಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿ ಮಾಡಿ ಸಂಗ್ರಹಿಸಲು ಆರಂಭಿಸಿದ ಹಿನ್ನೆಲೆಯಲ್ಲಿ, ಶುಕ್ರವಾರದಿಂದಲೇ ಸರಕಾರ ದಿನನಿತ್ಯದ ಇಂಧನ ಮಾರಾಟಕ್ಕೆ ಮಿತಿ ವಿಧಿಸಿದೆ.
ಇದಲ್ಲದೆ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ವಿದ್ಯುತ್ ಬಳಕೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವಂತೆ ಬಾಂಗ್ಲಾದೇಶ ಸರಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.







