ಹಸೀನಾ ವಿರುದ್ಧ ನರಮೇಧದ ದೋಷಾರೋಪ; ಬಾಂಗ್ಲಾದಲ್ಲಿ ವಿಚಾರಣೆ ಆರಂಭ

PC: PTI
ಢಾಕಾ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣ (ಐಸಿಟಿ) ರವಿವಾರ ದೋಷಾರೋಪಣೆಯನ್ನು ದಾಖಲಿಸಿದೆ. ಕಳೆದ ವರ್ಷ ಬಾಂಗ್ಲಾದ್ಯಂತ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ದಮನಿಸುವುದಕ್ಕಾಗಿ 1400ಕ್ಕೂ ಅಧಿಕ ಮಂದಿಯ ಸಾಮೂಹಿಕ ಹತ್ಯಾಕಾಂಡವನ್ನು ನಡೆಸಿರುವುದು ಸೇರಿದಂತೆ ಹಲವು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.
ಬಾಂಗ್ಲಾದಲ್ಲಿ ತನ್ನ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ದೇಶ ತೊರೆದು ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡ 10 ತಿಂಗಳ ಬಳಿಕ ಅವರ ಅನುಪಸ್ಥಿತಿಯಲ್ಲಿ ಈ ಕಾನೂನು ಕಲಾಪಗಳು ಆರ್ಂಭಗೊಂಡಿವೆ.
ಬಾಂಗ್ಲಾದೇಶದ ಪ್ರಾಸಿಕ್ಯೂಟರ್ಗಳು ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧವೆಸಗಿದ ದೋಷಾರೋಪಣೆಯನ್ನು ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಔಪಚಾರಿಕವಾಗಿ ದಾಖಲಿಸಿದ್ದು ವಿಚಾರಣೆ ರವಿವಾರ ಆರಂಭಗೊಂಡಿದೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.
ಹಸೀನಾ ಅವರಲ್ಲದೆ, ದೇಶದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಲ್ ಮತ್ತು ಮಾಜಿ ಐಜಿಪಿ ಚೌಧರಿ ಮಾಮುನ್ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ. ಇದೇ ಪ್ರಥಮ ಬಾರಿಗೆ, ನ್ಯಾಯಮಂಡಳಿಯ ಕಲಾಪವನ್ನು ಪ್ರಸಾರ ಮಾಡಲು ಸರ್ಕಾರಿ ಸ್ವಾಮ್ಯದ ಬಿಟಿವಿಗೆ ಅವಕಾಶ ನೀಡಲಾಗಿದೆ.
ಇದೇ ವೇಳೆ ಹಸೀನಾ ಹಾಗೂ ಅಸಾದುಝ್ಝಮಾನ್ ಖಾನ್ ಕಮಲ್ ವಿರುದ್ಧ ಐಟಿಸಿಯ ತ್ರಿಸದಸ್ಯ ಪೀಠವು ಹೊಸತಾಗಿ ಬಂಧನ ವಾರಂಟ್ ಜಾರಿಗೊಳಿಸಿದೆ.
ಮೂರನೆ ಆರೋಪಿ, ಆಗಿನ ಪೊಲೀಸ್ ಮಹಾನಿರೀಕ್ಷಕ ಚೌಧುರಿ ಅಬ್ದುಲ್ಲಾ ಅಲ್-ಮಮೂನ್ ಅವರು ಈಗಾಗಲೇ ಬಂಧನದಲ್ಲಿದ್ದಾರೆ.
ಬಾಂಗ್ಲಾ ವಿಮೋಚನಾ ಚಳವಳಿಯ ಹೋರಾಟಗಾರರ ಕುಟುಂಬಿಕರಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಪ್ರತಿಭಟಿಸಿ ಕಳೆದ ವರ್ಷದ ಜುಲೈನಲ್ಲಿ ಆರಂಭಗೊಂಡ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್ ಮತ್ತಿತರ ಹಿಂಸಾತ್ಮಕ ಘಟನೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದರು. ಆಗಸ್ಟ್ 5ರಂದು ಹಸೀನಾ ಅವರು ಬಾಂಗ್ಲಾವನ್ನು ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದರು.
ಇದಕ್ಕೂ ಮುನ್ನ ಬಾಂಗ್ಲಾದ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವು ಹಸೀನಾ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಆಕೆಯನ್ನು ಗಡಿಪಾರುಗೊಳಿಸುವಂತೆ ಕೋರಿ ಬಾಂಗ್ಲಾ ಸರಕಾರವು ಭಾರತಕ್ಕೆ ರಾಜತಾಂತ್ರಿಕ ಟಪ್ಪಣಿಯೊಂದನ್ನು ಸಲ್ಲಿಸಿತ್ತು. ಭಾರತ ಸರಕಾರವು ಟಿಪ್ಪಣಿಯನ್ನು ಸ್ವೀಕರಿಸಿತ್ತಾದರೂ, ಆ ಬಗ್ಗೆ ಯಾವುದೇ ಪ್ರತಿಕ್ರಿಯೆಯೆಯನ್ನು ನೀಡಿರಲಿಲ್ಲ.
ಕಳೆದ ವರ್ಷದ ಜುಲೈ-ಆಗಸ್ಟ್ ನಲ್ಲಿ ಬಾಂಗ್ಲಾದಲ್ಲಿ ನಡೆದ ಪ್ರತಿಭಟನೆ ನಡೆದ ಸಂದರ್ಭ ಹಿಂಸಾಚಾರದ ಸಂದರ್ಭ ವಿದ್ಯಾರ್ಥಿಗಳು, ಪೊಲೀಸರು ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಹಲವಾರು ನಾಯಕರು ಹಾಗೂ ಅವರ ಸರಕಾರದ ಪ್ರಮುಖ ಅಧಿಕಾರಿಗಳ ವಿರುದ್ಧ ಸಾಮೂಹಿಕ ಹತ್ಯಾಕಾಂಡದ ಆರೋಪವನ್ನು ಹೊರಿಸಲಾಗಿತ್ತು. ಕಳೆದ ವರ್ಷದ ಜುಲೈ 15 ಹಾಗೂ ಆಗಸ್ಟ್ 15ರ ನಡುವೆ ಬಾಂಗ್ಲಾದಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ 1400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.







