Bangladesh ಹಿಂಸಾಚಾರ: ಆಟೊ ಚಾಲಕನಿಗೆ ಥಳಿಸಿ ಹತ್ಯೆ

PC: x.com/CNNnews18
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮುಂದುವರಿದಿದ್ದು, ರವಿವಾರ ರಾತ್ರಿ ಆಟೊ ಚಾಲಕ ಸಮೀರ್ ದಾಸ್ ಅವರನ್ನು ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 28 ವರ್ಷ ವಯಸ್ಸಾಗಿತ್ತು.
ಚಿತ್ತಗಾಂಗ್ ಜಿಲ್ಲೆಯ ದಗನ್ಭೂಯಿಯಾನ್ ಪ್ರದೇಶದಲ್ಲಿ ರವಿವಾರ ರಾತ್ರಿ ಈ ಕರಾಳ ಹತ್ಯೆ ನಡೆದಿದೆ. ದಾಳಿಕೋರರು ಸಮೀರ್ ದಾಸ್ ಅವರನ್ನು ಅಮಾನುಷವಾಗಿ ಥಳಿಸಿ, ಚೂರಿಯಿಂದ ಇರಿದು ಕೊಂದಿದ್ದಾರೆ. ಹತ್ಯೆಯ ಬಳಿಕ ಅಪರಾಧಿಗಳು ಸಮೀರ್ ದಾಸ್ಗೆ ಸೇರಿದ ಬ್ಯಾಟರಿ ಚಾಲಿತ ರಿಕ್ಷಾವನ್ನು ಅಪಹರಿಸಿ ಪರಾರಿಯಾಗಿದ್ದಾರೆ.
“ದೇಶಿ ನಿರ್ಮಿತ ಆಯುಧಗಳಿಂದ ಹೊಡೆದು ಮತ್ತು ಥಳಿಸಿ ಸಮೀರ್ ಅವರನ್ನು ಹತ್ಯೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಪೂರ್ವಯೋಜಿತ ಹತ್ಯೆಯಂತೆ ಕಾಣುತ್ತಿದೆ. ದಾಳಿಕೋರರು ಹತ್ಯೆಯ ಬಳಿಕ ಆಟೊರಿಕ್ಷಾವನ್ನು ಅಪಹರಿಸಿದ್ದಾರೆ. ಸಂತ್ರಸ್ತ ಕುಟುಂಬ ಎಫ್ಐಆರ್ ದಾಖಲಿಸಲಿದೆ. ಹಲ್ಲೆಕೋರರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸ್ ಕಾರ್ಯಾಚರಣೆ ಆರಂಭವಾಗಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಸುಮಾರು 17 ಕೋಟಿ ಜನಸಂಖ್ಯೆ ಇದ್ದು, 2024ರಿಂದೀಚೆಗೆ ಹಿಂಸಾಚಾರ ನಡೆಯುತ್ತಿದೆ. ಸೂಫಿ ಮುಸ್ಲಿಮರು ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿವೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 10ರಷ್ಟು ಅಲ್ಪಸಂಖ್ಯಾತರು ಇದ್ದಾರೆ.







