ಬಾಂಗ್ಲಾದೇಶದ ಭವಿಷ್ಯವನ್ನು ಚುನಾಯಿತ ಸರ್ಕಾರ ನಿರ್ಧರಿಸಬೇಕು: ಡಿಸೆಂಬರ್ ಒಳಗೆ ಚುನಾವಣೆಗೆ ಸೇನಾ ಮುಖ್ಯಸ್ಥರ ಆಗ್ರಹ
ಮಿಲಿಟರಿ - ಮಧ್ಯಂತರ ಸರ್ಕಾರದ ನಡುವೆ ಬಿರುಕು?

Photo: NDTV
ಢಾಕಾ: ದೇಶದ ಭವಿಷ್ಯವನ್ನು ಚುನಾಯಿತ ಸರ್ಕಾರ ನಿರ್ಧರಿಸಬೇಕು ಎಂದು ಬಾಂಗ್ಲಾದೇಶ ಸೇನೆಯ ಮುಖ್ಯಸ್ಥ ಜನರಲ್ ವಕಾರ್ ಉಜ್-ಜಮಾನ್ ಹೇಳಿದ್ದು ದೇಶದಲ್ಲಿ ಡಿಸೆಂಬರ್ ನೊಳಗೆ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ಮತ್ತು ಮಿಲಿಟರಿ ನಡುವೆ ಬಿರುಕು ಕಾಣಿಸಿಕೊಂಡಿದೆ ಎಂಬ ವರದಿಗೆ ಈ ಬೆಳವಣಿಗೆ ಪುಷ್ಟಿ ನೀಡಿದೆ. ಕಳೆದ ಆಗಸ್ಟ್ ನಲ್ಲಿ ಶೇಖ್ ಹಸೀನಾ ಸರಕಾರ ಪದಚ್ಯುತಗೊಂಡ ಬಳಿಕ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮಧ್ಯಂತರ ಸರ್ಕಾರ ಅಧಿಕಾರದಲ್ಲಿ ಉಳಿಯು ದೇಶದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಢಾಕಾ ಕಂಟೋನ್ಮೆಂಟ್ ನಲ್ಲಿ ಸೇನಾಧಿಕಾರಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೊಹಿಂಗ್ಯಾ ಬಿಕ್ಕಟ್ಟನ್ನು ನಿಭಾಯಿಸಲು `ಮಾನವೀಯ ಕಾರಿಡಾರ್' ಸ್ಥಾಪಿಸುವ ಕುರಿತ ನಿರ್ಧಾರವನ್ನು ಚುನಾಯಿತ ಸರ್ಕಾರವು ಸೂಕ್ತ ಪ್ರಕ್ರಿಯೆಯ ಮೂಲಕ ಕೈಗೊಳ್ಳಬೇಕು. ಸೇನೆಯು ಯಾವುದೇ ಸಂದರ್ಭದಲ್ಲೂ ಕಾರಿಡಾರ್ ಯೋಜನೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರೀಯ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳುವಂತಹ ಚಟುವಟಿಕೆಗಳಲ್ಲಿ ಎಂದಿಗೂ ತೊಡಗಿಸಿಕೊಳ್ಳುವುದಿಲ್ಲ ಎಂಬ ಸೇನೆಯ ಬದ್ಧತೆಯನ್ನು ಪುನರುಚ್ಚರಿಸಿದ ಜ| ಜಮಾನ್ ಮಧ್ಯಂತರ ಸರಕಾರವು ಚುನಾವಣೆ ನಡೆಯುವ ತನಕದ ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಪರೋಕ್ಷವಾಗಿ ಉಲ್ಲೇಖಿಸಿದರು. ತನ್ನೊಂದಿಗೆ ಚರ್ಚಿಸಲಾಗಿಲ್ಲವಾದ್ದರಿಂದ ದೇಶದಲ್ಲಿ ನಡೆಸುತ್ತಿರುವ ಯಾವುದೇ ಸುಧಾರಣೆಗಳ ಬಗ್ಗೆ ತನಗೆ ತಿಳಿದಿಲ್ಲ. ಇಂತಹ ನಿರ್ಧಾರಗಳನ್ನು ರಾಜಕೀಯ ಸರಕಾರ ತೆಗೆದುಕೊಳ್ಳಬೇಕು ಎಂದು ಹೇಳಿರುವುದಾಗಿ ವರದಿಯಾಗಿದೆ.
ಛಟ್ಟೋಗ್ರಾಮ್ ಬಂದರಿನ `ನ್ಯೂ ಮೂರಿಂಗ್ ಕಂಟೈನರ್ ಟರ್ಮಿನಲ್'ನ ಕಾರ್ಯಾಚರಣಾ ನಿಯಂತ್ರಣವನ್ನು ವಿದೇಶಿ ಸಂಸ್ಥೆಗಳಿಗೆ ವರ್ಗಾಯಿಸಲು ಮಧ್ಯಂತರ ಸರ್ಕಾರದ ಒಲವಿನ ಬಗ್ಗೆ ಬಗ್ಗೆ ಈ ಹೇಳಿಕೆ ಸುಳಿವು ನೀಡಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಈ ಮಧ್ಯೆ, ಸೇನಾ ಮುಖ್ಯಸ್ಥರ ನಿವಾಸ `ಸೇನಾ ನಿವಾಸ'ದ ಸುತ್ತಮುತ್ತ ಸಭೆ, ರ್ಯಾಲಿ
, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಮಧ್ಯಂತರ ಸರ್ಕಾರ ಮತ್ತು ಮಿಲಿಟರಿ ನಡುವೆ ಬಿರುಕು ಆಳವಾಗುತ್ತಿದೆ ಎಂಬ ವರದಿಯನ್ನು ಮಧ್ಯಂತರ ಸರ್ಕಾರದ ವಕ್ತಾರರು ತಳ್ಳಿಹಾಕಿದ್ದು ಇಂತಹ ಗಾಳಿ ಸುದ್ದಿಯ ಮೂಲಕ ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
►ಮಾನವೀಯ ಕಾರಿಡಾರ್
ರೊಹಿಂಗ್ಯಾ ಬಿಕ್ಕಟ್ಟನ್ನು ನಿರ್ವಹಿಸಲು ವಿಶ್ವಸಂಸ್ಥೆ ಪ್ರಸ್ತಾಪಿಸಿರುವ ರಾಖೈನ್ ಕಾರಿಡಾರ್ ಯೋಜನೆಗೆ ಮಧ್ಯಂತರ ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ಬಾಂಗ್ಲಾದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪೂರ್ವ ಬಾಂಗ್ಲಾದೇಶದ ಛಟ್ಟೋಗ್ರಾಮ್ ನಗರದಿಂದ ಆರಂಭಗೊಳ್ಳುವ ಕಾರಿಡಾರ್, ಯುದ್ಧದಿಂದ ಜರ್ಜರಿತಗೊಂಡಿರುವ ಮ್ಯಾನ್ಮಾರ್ ನ ರಾಖೈನ್ ಪ್ರದೇಶಕ್ಕೆ ಮಾನವೀಯ ಸಹಾಯ ಒದಗಿಸುವ ದಾರಿಯಾಗಿದೆ.
ಆದರೆ ಈ ಯೋಜನೆಯಿಂದ ಬಾಂಗ್ಲಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ. ಇದು ಏಕಪಕ್ಷೀಯ ಮತ್ತು ಕಾನೂನುಬಾಹಿರ ಎಂದು ಬಿಎನ್ಪಿ ಸೇರಿದಂತೆ ಬಾಂಗ್ಲಾದ ಪ್ರಮುಖ ರಾಜಕೀಯ ಪಕ್ಷಗಳು ವಿರೋಧಿಸಿವೆ.







