ಬಿಬಿಸಿಯಿಂದ ಫೆಲೆಸ್ತೀನಿ ವಿರೋಧಿ ವರ್ಣಭೇದ ನೀತಿ | ಸುದ್ದಿಪ್ರಸಾರದಲ್ಲಿ ಇಸ್ರೇಲ್ ಪರ ಪಕ್ಷಪಾತ: ಸಿಬ್ಬಂದಿಗಳ ಆರೋಪ; ಸಹಿ ಸಂಗ್ರಹ

PC : aljazeera.com
ಲಂಡನ್: ಬಿಬಿಸಿ ಸುದ್ದಿಸಂಸ್ಥೆ ಇಸ್ರೇಲ್ ಸರಕಾರದ ಪಿಆರ್(ಸಾರ್ವಜನಿಕ ಸಂಪರ್ಕಾಧಿಕಾರಿ) ನಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ಮತ್ತು ಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿರುವ ಆಡಳಿತ ಮಂಡಳಿ ಸದಸ್ಯ ಸರ್ ರಾಬೀ ಗಿಬ್ರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ 111 ಬಿಬಿಸಿ ಪತ್ರಕರ್ತರು ಸೇರಿದಂತೆ 400ಕ್ಕೂ ಅಧಿಕ ಮಾಧ್ಯಮ ಸಿಬ್ಬಂದಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪ್ರಧಾನ ನಿರ್ದೇಶಕ ಟಿಮ್ ಡೇವೀ ಮತ್ತು ಬಿಬಿಸಿ ಆಡಳಿತ ಮಂಡಳಿಯನ್ನು ಉದ್ದೇಶಿಸಿರುವ ಪತ್ರದಲ್ಲಿ ಸರಣಿ ಸಂಪಾದಕೀಯ ವಿವಾದಗಳನ್ನು ಉಲ್ಲೇಖಿಸಿದ್ದು ಇಸ್ರೇಲ್-ಗಾಝಾ ಬಿಕ್ಕಟ್ಟಿನ ವರದಿ ಪ್ರಸಾರದಲ್ಲಿ ಬಿಬಿಸಿಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಲಾಗಿದೆ.
ಗ್ಲಾಸ್ಟನ್ಬರಿಯಲ್ಲಿ ಗಾಯಕ ಜೋಡಿ ಬಾಬ್ ವೈಲನ್ ಅವರಿಂದ ಇಸ್ರೇಲ್ ವಿರೋಧಿ ಗಾಯನದ ನೇರ ಪ್ರಸಾರವನ್ನು ತಡೆಹಿಡಿದಿರುವುದು ಮತ್ತು ಗಾಝಾ ಕುರಿತ ಸಾಕ್ಷ್ಯಚಿತ್ರವನ್ನು ಪ್ರಸಾರದಿಂದ ಹಿಂಪಡೆದಿರುವುದು ಮುಂತಾದ ಘಟನೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
`ಹಲವು ಸಂದರ್ಭಗಳಲ್ಲಿ ಬಿಬಿಸಿಯ ವರ್ತನೆ ಇಸ್ರೇಲ್ ಸರ್ಕಾರ ಮತ್ತು ಮಿಲಿಟರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯ ರೀತಿಯಲ್ಲಿತ್ತು. ಇದು ಬಿಬಿಸಿಯ ಎಲ್ಲರಿಗೂ ಬಹಳ ಅವಮಾನ ಮತ್ತು ಕಳವಳಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ.
`ಗಾಝಾ: ಡಾಕ್ಟರ್ಸ್ ಅಂಡರ್ ಅಟ್ಯಾಕ್' ಎಂಬ ಸಾಕ್ಷ್ಯಚಿತ್ರವನ್ನು ಪ್ರಸಾರದಿಂದ ಹಿಂದಕ್ಕೆ ಪಡೆಯುವ ಬಿಬಿಸಿಯ ನಿರ್ಧಾರ ವಿವಾದದ ಪ್ರಮುಖ ಅಂಶವಾಗಿದೆ(ಇದನ್ನು ಈಗ ಚಾನೆಲ್ 4ರಲ್ಲಿ ಪ್ರಸಾರ ಮಾಡಲಾಗುತ್ತಿದೆ).
`ಪಕ್ಷಪಾತದ ಗ್ರಹಿಕೆ' ಮೂಡುವುದನ್ನು ತಪ್ಪಿಸಲು ಈ ಕ್ರಮ ಎಂದು ಬಿಬಿಸಿ ಹೇಳಿದೆ. ಈ ಹೇಳಿಕೆಯನ್ನು ಪತ್ರದಲ್ಲಿ ಪ್ರಶ್ನಿಸಲಾಗಿದೆ. `ಇದು ರಾಜಕೀಯ ನಿರ್ಧಾರದಂತೆ ಕಾಣುತ್ತದೆ. ಪತ್ರಿಕೋದ್ಯಮದ ಪ್ರತಿಫಲನವಲ್ಲ. ಇಸ್ರೇಲಿ ಸರ್ಕಾರವನ್ನು ಟೀಕಿಸಲು ಭಯಪಡುವ ಸಂಸ್ಥೆಯೆಂಬ ನಮ್ಮಲ್ಲಿ ಹಲವರ ಅನಿಸಿಕೆಗೆ ಈ ಹೇಳಿಕೆ ದೃಷ್ಟಾಂತವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಿಬಿಸಿಯು ಆಂತರಿಕ ಟೀಕೆ ಮತ್ತು ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ನಿಭಾಯಿಸುವಲ್ಲಿ ಬಿಬಿಸಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ.
ಇಸ್ರೇಲನ್ನು ಟೀಕಿಸುವ ಲೇಖನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಪಕ್ಷಪಾತದ ಆರೋಪಗಳನ್ನು ಹಲವು ಸಿಬ್ಬಂದಿಗಳು ಎದುರಿಸುತ್ತಿದ್ದಾರೆ. ಗಿಬ್ ಅವರ `ಸೈದ್ಧಾಂತಿಕ ಒಲವು' ಚಿರಪರಿಚಿತವಾಗಿದ್ದರೂ ಅವರು ಪ್ರಭಾವಶಾಲೀ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಗಿಬ್ ಅವರ ಸೈದ್ಧಾಂತಿಕ ನಿಷ್ಠೆಯನ್ನು ಕಡೆಗಣಿಸುವಂತೆ ಕೇಳಲು ಇನ್ನುಮುಂದೆ ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
*ಸಂಪಾದಕೀಯ ಮಾನದಂಡದ ಬಗ್ಗೆ ಪ್ರಶ್ನೆ
ನಟಿ ಮಿರಿಯಮ್ ಮಾರ್ಗೊಲೈಸ್, ಸಿನೆಮ ನಿರ್ಮಾಪಕ ಮೈಕ್ ಲೇಘ್, ನಟ ಚಾರ್ಲ್ಸ್ ಡಾನ್ಸ್, ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಸೇರಿದಂತೆ ಪ್ರಮುಖರು ಪತ್ರಕ್ಕೆ ಸಹಿಹಾಕಿದ್ದು ಗಾಝಾದ ಕುರಿತ ವರದಿ ಪ್ರಸಾರವು ಬಿಬಿಸಿಯ ಸಂಪಾದಕೀಯ ಮಾನದಂಡದ ಮಟ್ಟದಲ್ಲಿಲ್ಲ ಮತ್ತು ವಾಸ್ತವ ಪರಿಸ್ಥಿತಿಯನ್ನು ನಿಖರವಾಗಿ ಪ್ರತಿಬಿಂಬಿಸಿಲ್ಲ ಎಂದು ಟೀಕಿಸಿದ್ದಾರೆ.
ಬಿಬಿಸಿಯ ಸಂಪಾದಕೀಯ ಆಯ್ಕೆಗಳು ನಿರ್ದಿಷ್ಟ ಸ್ಥಳದಲ್ಲಿ ನಿಜವಾದ ಪರಿಸ್ಥಿತಿಗಳಿಂದ ಸಂಪರ್ಕ ಕಡಿತಗೊಂಡಿವೆ. ರಾಜಕೀಯ ಕಾರ್ಯಸೂಚಿಗೆ ಸರಿಹೊಂದುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ನಾವು ತೀರ್ಮಾನಿಸಲು ಒತ್ತಾಯಿಸಲ್ಪಟ್ಟೆದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಮ್ಮ ಪತ್ರಿಕೋದ್ಯಮದ ಬಗ್ಗೆ ನಮ್ಮ ಸಂಪಾದಕೀಯ ತಂಡಗಳ ನಡುವೆ ಹುರುಪಿನ ಚರ್ಚೆಗಳು ಸಂಪಾದಕೀಯ ಪ್ರಕ್ರಿಯೆಯ ಅತ್ಯಗತ್ಯ ಭಾಗವಾಗಿದೆ. ಗಾಝಾದ ಬಗ್ಗೆ ನಿಷ್ಪಕ್ಷಪಾತ ವರದಿ ಪ್ರಸಾರ ಮಾಡಿದ್ದೇವೆ. ಸುದ್ದಿ `ಕವರೇಜ್'ನ ಬಗ್ಗೆ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದೇವೆ ಮತ್ತು ನಮ್ಮ ಸಿಬ್ಬಂದಿಗಳಿಂದ ಪ್ರತಿಕ್ರಿಯೆಯನ್ನು ಆಲಿಸುತ್ತೇವೆ. ಈ ಸಂಭಾಷಣೆಗಳು ಆಂತರಿಕವಾಗಿ ಅತ್ಯುತ್ತಮ ರೀತಿಯಲ್ಲಿ ನಡೆಯುತ್ತದೆ' ಎಂದು ಬಿಬಿಸಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.







