ಐಸಿಸಿ ನಿರ್ದೇಶಕ ಸ್ಥಾನದಿಂದ ನಖ್ವಿ ವಜಾಗೆ ಬಿಸಿಸಿಐ ಕಾರ್ಯತಂತ್ರ

PC: x.com/WIONews
ಹೊಸದಿಲ್ಲಿ: ಭಾರತ ಗೆದ್ದ ಏಷ್ಯಾ ಕಪ್ ಅನ್ನು ಅಕ್ರಮವಾಗಿ ತಮ್ಮ ಬಳಿ ಇರಿಸಿಕೊಂಡ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ, ರಕ್ಷಣಾ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಯವರನ್ನು ಐಸಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯತಂತ್ರ ರೂಪಿಸಿದೆ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟಿಗರು ಪಾಕಿಸ್ತಾನದ ಆಟಗಾರರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರಂಭವಾದ ವಿವಾದ, ಫೈನಲ್ ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಗೆದ್ದಾಗ ನಖ್ವಿಯವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸುವ ವರೆಗೆ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ನಖ್ವಿ ಟ್ರೋಫಿಯೊಂದಿಗೆ ವೇದಿಕೆಯಿಂದ ನಿರ್ಗಮಿಸಿದ್ದರು. ತಮ್ಮ ಅನುಮತಿ ಇಲ್ಲದೇ ಎಸಿಸಿ ಕಚೇರಿಯಿಂದ ಟ್ರೋಫಿಯನ್ನು ಯಾರೂ ಮುಟ್ಟಬಾರದು ಎಂದು ಫರ್ಮಾನು ಹೊರಡಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಈ ವಿಚಾರವನ್ನು ಮುಂದಿನ ತಿಂಗಳು ನಡೆಯುವ ಐಸಿಸಿ ಸಭೆಯಲ್ಲಿ ಪ್ರಶ್ನಿಸಲಿದೆ. ನಖ್ವಿಯವರಿಗೆ ಛೀಮಾರಿ ಹಾಕಿ, ಅವರನ್ನು ಐಸಿಸಿ ನಿರ್ದೇಶಕ ಸ್ಥಾನದಿಂದ ವಜಾ ಮಾಡಲು ಭಾರತ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.
ಟ್ರೋಫಿಯನ್ನು ಭಾರತ ತಂಡಕ್ಕೆ ತಾವೇ ವಿತರಿಸಬೇಕು ಎಂದು ಕಡ್ಡಾಯಪಡಿಸುವ ಯಾವುದೇ ಅಧಿಕಾರ ನಖ್ವಿಯವರಿಗೆ ಇಲ್ಲ ಹಾಗೂ ಟೂರ್ನಿಯ ಆಯೋಜಕರಾದ ಬಿಸಿಸಿಐಗೆ ಅದನ್ನು ಕಳುಹಿಸಿಕೊಡಲು ನಿರಾಕರಿಸಿರುವುದು ಭಾರತವನ್ನು ಕೆರಳಿಸಿದೆ.







