ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ: ಬೆಂಜಮಿನ್ ನೆತನ್ಯಾಹು

ಬೆಂಜಮಿನ್ ನೆತನ್ಯಾಹು | Photo Credit : PTI
ಜೆರುಸಲೇಂ,ಎ.9: ಇರಾನ್ ಜೊತೆ ಅಮೆರಿಕ ಏರ್ಪಡಿಸಿಕೊಂಡಿರುವ ಕದನವಿರಾಮವು ಲೆಬನಾನ್ಗೆ ಅನ್ವಯಿಸುವುದಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಇರಾನ್ ಬೆಂಬಲಿತ ಹಿಝ್ಬುಲ್ಲಾ ಹೋರಾಟಗಾರರ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇರಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ತಿಳಿಸಿದ್ದಾರೆ.
ಇರಾನ್ ಜೊತೆ ಅಮೆರಿಕ ಕದನವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್ ಸೇನೆಯು ಲೆಬನಾನ್ನಲ್ಲಿ ಭೀಕರ ವಾಯುದಾಳಿಗಳನ್ನು ಮುಂದುವರಿಸಿದ ಮರುದಿನವೇ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.
ಹಿಝ್ಬುಲ್ಲಾ ವಿರುದ್ಧ ಶಕ್ತಿ, ನಿಖರತೆ ಹಾಗೂ ದೃಢನಿರ್ಧಾರದೊಂದಿಗೆ ದಾಳಿಗಳನ್ನು ನಾವು ಮುಂದುವರಿಸಲಿದ್ದೇವೆ ಎಂದು ನೆತನ್ಯಾಹು, ತನ್ನ ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘‘ನಮ್ಮ ಸಂದೇಶ ಸ್ಪಷ್ಟವಾಗಿದೆ. ಇಸ್ರೇಲಿ ನಾಗರಿಕರ ವಿರುದ್ಧ ಯಾರು ಕೃತ್ಯವೆಸಗುತ್ತಾರೋ ಅವರ ಮೇಲೆ ನಾವು ದಾಳಿ ನಡೆಸುತ್ತೇವೆ. ಉತ್ತರ ಇಸ್ರೇಲ್ನ ನಿವಾಸಿಗಳ ಭದ್ರತೆಯನ್ನು ಮರುಸ್ಥಾಪಿಸುವ ತನಕ ಅಗತ್ಯವಿರುವಲೆಲ್ಲಾ ನಾವು ಹಿಝ್ಬುಲ್ಲಾ ವಿರುದ್ಧ ದಾಳಿಯನ್ನು ಮುಂದುವರಿಸಲಿದ್ದೇವೆ’’ ಎಂದವರು ಹೇಳಿದ್ದಾರೆ.
ಇಸ್ರೇಲ್ ಸೇನೆಯಿಂದ ಹಿಝ್ಬಲ್ಲಾ ಮುಖಂಡನ ಹತ್ಯೆ
ಹಿಝ್ಬಲ್ಲಾ ಸಂಘಟನೆಯ ಮಹಾ ಕಾರ್ಯದರ್ಶಿ ನಯೀಮ್ ಖಾಸಿಮ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಸೋದರ ಪುತ್ರ ಅಲಿ ಯೂಸುಫ್ ಹಾರ್ಷಿ ಅವರನ್ನು ಹತ್ಯೆಗೈಯಲಾಗಿದೆಯೆಂದು ಇಸ್ರೇಲ್ ಸೇನೆ ಬುಧವಾರ ತಿಳಿಸಿದೆ. ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ನಡೆಸಿದ ವಾಯುದಾಳಿಯಲ್ಲಿ ಯೂಸುಫ್ ಹಾರ್ಷಿ ಮೃತಪಟ್ಟಿದ್ದಾರೆಂದು ಹೇಳಿದೆ.
ರಾಜಧಾನಿ ಲೆಬನಾನ್ ಸೇರಿದಂತೆ ಬುಧವಾರ ಬೈರೂತ್ನಾದ್ಯಂತ ಇಸ್ರೇಲ್ ನಡೆಸಿದ ವಾಯುದಾಳಿಗಳಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಕನಿಷ್ಠ 890 ಮಂದಿ ಗಾಯಗೊಂಡಿದ್ದರು. ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಲೆಬನಾನ್ ಗುರುವಾರ ಶೋಕಾಚರಣೆ ನಡೆಸಿದೆ.
ಇಸ್ರೇಲ್ ಕದನವಿರಾಮ ಉಲ್ಲಂಘನೆಗೆ ಪ್ರತ್ಯುತ್ತರವಾಗಿ ತಾನು ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿಗಳನ್ನು ನಡೆಸಿರುವುದಾಗಿ ಹಿಝ್ಬುಲ್ಲಾ ತಿಳಿಸಿದೆ.







