ಕ್ಷಿಪ್ರಕ್ರಾಂತಿಗೆ ಬೆಂಜಮಿನ್ ನೆತನ್ಯಾಹು ಯತ್ನ: ಇಸ್ರೇಲ್ ವಿರೋಧ ಪಕ್ಷದ ನಾಯಕರ ಆಕ್ರೋಶ

ಬೆಂಜಮಿನ್ ನೆತನ್ಯಾಹು | Photo Credit : AP , PTI
ಜೆರುಸಲೆಮ್: ಕಳೆದ ತಿಂಗಳು ನಡೆದ ಚುನಾವಣೆಗೂ ಮುನ್ನ ಅರಬ್-ಇಸ್ರೇಲಿ ಪಕ್ಷದ ಸದಸ್ಯರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ನಿರ್ಗಮಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಪ್ರಯತ್ನಿಸಿತ್ತು ಎಂಬ ಮಾಧ್ಯಮ ವರದಿಗಳ ಬೆನ್ನಲ್ಲೇ, ಇಸ್ರೇಲ್ನ ಇಬ್ಬರು ವಿರೋಧ ಪಕ್ಷದ ನಾಯಕರು ಇದೊಂದು `ಕ್ಷಿಪ್ರಕ್ರಾಂತಿಯ (ದಂಗೆಯ) ಯತ್ನ' ಎಂದು ಸೋಮವಾರ ತೀವ್ರವಾಗಿ ಖಂಡಿಸಿದ್ದಾರೆ.
ಹೆಚ್ಚು ಹೆಚ್ಚು ವಿವರಗಳು ಹೊರಬರುತ್ತಿದ್ದಂತೆ ಒಂದು ವಿಷಯ ಸ್ಪಷ್ಟವಾಗುತ್ತಿದೆ: ಇದು ಕೇವಲ ಚುನಾವಣೆಗೆ ಅಡ್ಡಿಪಡಿಸುವ ಪ್ರಯತ್ನವಾಗಿರಲಿಲ್ಲ, ಬದಲಾಗಿ ಇದೊಂದು ಕ್ಷಿಪ್ರಕ್ರಾಂತಿಯ ಪ್ರಯತ್ನವಾಗಿತ್ತು' ಎಂದು ಹಿಂದಿನ ಶಾಸಕಾಂಗದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮತ್ತು `ಬೆಯಾಚಾದ್' ಪಕ್ಷದ ಸಹ-ಅಧ್ಯಕ್ಷರಾಗಿರುವ ಯೈರ್ ಲ್ಯಾಪಿಡ್ `ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚುನಾವಣೆಯ ಮುನ್ನಾದಿನದಂದು, ನೆತನ್ಯಾಹು ಅವರ ಸಿಬ್ಬಂದಿ ಮುಖ್ಯಸ್ಥ ಇದೋ ನಾರ್ಡೆನ್ ಅವರು ಅರಬ್-ಇಸ್ರೇಲಿ `ರಾಮ್' ಪಕ್ಷದ ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು ಎಂದು ಇಸ್ರೇಲ್ನ ಚಾನೆಲ್ 12 ರವಿವಾರ ವರದಿ ಮಾಡಿದೆ. ವರದಿಯ ಪ್ರಕಾರ, ನಾರ್ಡೆನ್ ಅವರು ನೆತನ್ಯಾಹು ಕಚೇರಿಯ ಮಾಜಿ ಉದ್ಯೋಗಿಯಾಗಿದ್ದ `ಗುಪ್ತಚರ ಮೂಲ'ವೊಂದನ್ನು ಪೊಲೀಸರಿಗೆ ಪರಿಚಯಿಸಿದ್ದರು. ಆ ವ್ಯಕ್ತಿ ನೀಡಿದ ಮಾಹಿತಿಯ ಆಧಾರದ ಮೇಲೆ `ರಾಮ್' ಪಕ್ಷದ ಮೂವರು ಸದಸ್ಯರನ್ನು ಬಂಧಿಸಲಾಗಿತ್ತು. ಆದರೆ, ಆ ಮಾಹಿತಿಯು ಆಧಾರರಹಿತ ಎಂದು ತಿಳಿದುಬಂದ ನಂತರ ಆ ಮೂವರನ್ನೂ ಬಿಡುಗಡೆ ಮಾಡಲಾಯಿತು.
ಚುನಾವಣೆಯಲ್ಲಿ ಅರಬ್ ಪಕ್ಷಗಳು ದಾಖಲೆಯ ಸಂಖ್ಯೆಯ ಸ್ಥಾನಗಳನ್ನು ಗೆದ್ದ ನಂತರ, ನೆತನ್ಯಾಹು ಅವರು ಅರಬ್ ಪಕ್ಷಗಳ ವಿರುದ್ಧ ಚುನಾವಣಾ ವಂಚನೆಯ ಆರೋಪ ಮಾಡಿದ್ದರು.
ಆಂತರಿಕ ಭದ್ರತಾ ಸೇವೆಯಾದ `ಶಿನ್ ಬೆಟ್' ಮುಖ್ಯಸ್ಥ ಡೇವಿಡ್ ಜಿನಿ ಅವರು ಮತ್ತೊಂದು ಅರಬ್ ಒಕ್ಕೂಟವಾದ `ಜಾಯಿಂಟ್ ಲಿಸ್ಟ್' ನಾಯಕರ ಫೋನ್ ಕದ್ದಾಲಿಕೆಗೆ ಅನುಮತಿ ಕೋರಿದ್ದರು, ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಟಾರ್ನಿ ಜನರಲ್ ಅವರ ಮನವಿಯನ್ನು ತಿರಸ್ಕರಿಸಿದ್ದರು ಎಂದು ಇಸ್ರೇಲಿ ಪತ್ರಿಕೆ `ಹಾರ್ಟೆಜ್' ವರದಿ ಮಾಡಿದೆ.
ಈ ವರದಿಯ ಬೆನ್ನಲ್ಲೇ, ಜಾಯಿಂಟ್ ಲಿಸ್ಟ್ ನಾಯಕ ಯೂಸುಫ್ ಜಬರೀನ್ ` ಈ ಮಾಹಿತಿಗಳು ದೃಢಪಟ್ಟರೆ, ಚುನಾವಣಾ ಫಲಿತಾಂಶಗಳನ್ನು ತಿರುಚಲು ಸರಕಾರದ ಕೇಂದ್ರ ಸ್ಥಾನದಿಂದಲೇ ಕಾರ್ಯನಿರ್ವಹಿಸಿದ ಅಪರಾಧ ಜಾಲ ಇದಾಗಿದೆ. ನೆತನ್ಯಾಹು ಸೇರಿದಂತೆ ಇದಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ಹೊಣೆಗಾರರನ್ನಾಗಿ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.
ನೆತನ್ಯಾಹು ಅವರ ಪ್ರಮುಖ ಪ್ರತಿಸ್ಪರ್ಧಿ, ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ಅವರು ` ಉಸ್ತುವಾರಿ ಪ್ರಧಾನಿಯು ಇನ್ನು ಒಂದು ನಿಮಿಷವೂ ಸರಕಾರದ ಮುಖ್ಯಸ್ಥರಾಗಿ ಮುಂದುವರಿಯಲು ಸಾಧ್ಯವಿಲ್ಲ' ಎಂದಿದ್ದಾರೆ.
ಕಳೆದ ತಿಂಗಳ ಚುನಾವಣೆಯ ನಂತರ ನೆತನ್ಯಾಹು ಅವರ ಬಣವಾಗಲಿ ಅಥವಾ ಐಸೆನ್ಕೋಟ್ ಅವರ ವಿರೋಧ ಪಕ್ಷವಾಗಲಿ ಸರಕಾರ ರಚಿಸಲು ಅಗತ್ಯವಿರುವ 61 ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿವೆ. ಎರಡು ಪ್ರಮುಖ ಅರಬ್ ಪಕ್ಷಗಳು ಐಸೆನ್ಕೋಟ್ ಅವರಿಗೆ ಬೆಂಬಲ ಸೂಚಿಸಿವೆ.






