ಇಸ್ರೇಲ್ನ ಹಿತಾಸಕ್ತಿ ಕಡೆಗಣಿಸಿದ್ದ ನೆತನ್ಯಾಹು: ಆತ್ಮಚರಿತ್ರೆಯಲ್ಲಿ ಬೈಡನ್ ಆರೋಪ

ಬೆಂಜಮಿನ್ ನೆತನ್ಯಾಹು , ಜೋ ಬೈಡನ್ | Photo Credit : AP
ವಾಶಿಂಗ್ಟನ್: ಗಾಝಾ ಯುದ್ಧದ ವಿಚಾರದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹುಸಿ ಭರವಸೆಗಳನ್ನು ನೀಡಿದ್ದರು ಮತ್ತು ಇಸ್ರೇಲ್ನ ದೀರ್ಘಕಾಲೀನ ಹಿತಾಸಕ್ತಿಗಳಿಗಿಂತ ತಮ್ಮ ರಾಜಕೀಯ ಉಳಿವಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ.
ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ನಂತರ ಗಾಝಾದಲ್ಲಿ ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಬೇಕೆಂಬ ಅಮೆರಿಕದ ಆಗ್ರಹಗಳಿಗೆ ನೆತನ್ಯಾಹು ಸ್ಪಂದಿಸದಿರುವುದಕ್ಕೆ ತಮಗೆ ತೀವ್ರ ನಿರಾಶೆಯಾಗಿತ್ತು ಎಂದು ಸಿಎನ್ಎನ್ ಪ್ರಕಟಿಸಿರುವ ತಮ್ಮ ಮುಂಬರುವ ಆತ್ಮಚರಿತ್ರೆ `ಪ್ರಾಮಿಸ್ ಮಿ, ಅಮೆರಿಕಾ' ಪುಸ್ತಕದ ಆಯ್ದ ಭಾಗಗಳಲ್ಲಿ ಬೈಡನ್ ಉಲ್ಲೇಖಿಸಿದ್ದಾರೆ.
ಫೆಲಸ್ತೀನಿಯನ್ ನಾಗರಿಕರ ಸಂಕಷ್ಟಗಳನ್ನು ಮಿತಿಗೊಳಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಇಸ್ರೇಲ್ ಅನ್ನು ಪದೇ ಪದೇ ಒತ್ತಾಯಿಸಿದ್ದೆ. ಆದರೆ, ಹೆಚ್ಚುತ್ತಿರುವ ಸಾವುನೋವುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ನ ಘನತೆಗೆ ಮತ್ತು ಯುದ್ಧಕ್ಕೆ ಅಮೆರಿಕ ನೀಡುತ್ತಿರುವ ಬೆಂಬಲಕ್ಕೆ ಧಕ್ಕೆ ತರುತ್ತಿವೆ ಎಂಬುದನ್ನು ಒಪ್ಪಿಕೊಂಡರೂ, ನೆತನ್ಯಾಹು ತಮ್ಮ ಸೇನಾ ಕಾರ್ಯಾಚರಣೆಯನ್ನು ಬದಲಾಯಿಸಲು ವಿಫಲರಾದರು ಎಂದು ಬೈಡನ್ ಆರೋಪಿಸಿದ್ದಾರೆ. ನೆತನ್ಯಾಹು ಅವರ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸಿರುವ ಬೈಡನ್ `ತಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲದ - ಅಥವಾ ಉಳಿಸಿಕೊಳ್ಳುವ ಉದ್ದೇಶವಿಲ್ಲದ - ಭರವಸೆಗಳನ್ನು ನೀಡಲು `ಬಿಬಿ' (ನೆತನ್ಯಾಹು) ಅವರಿಗೆ ಯಾವುದೇ ಹಿಂಜರಿಕೆ ಇರಲಿಲ್ಲ' ಎಂದು ಬರೆದಿದ್ದಾರೆ.






