ಗಾಝಾ ಆಸ್ಪತ್ರೆ ದಾಳಿ ಹಿನ್ನೆಲೆ: ಬೈಡನ್- ಅರಬ್ ಮುಖಂಡರ ಭೇಟಿ ರದ್ದು

ಜೆರುಸಲೇಂ: ಗಾಝಾ ಆಸ್ಪತ್ರೆಯಲ್ಲಿ 500 ಮಂದಿಯ ಸಾವಿಗೆ ಕಾರಣವಾದ ಭೀಕರ ಸ್ಫೋಟ ಪ್ರಕರಣದಿಂದ "ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್ ಹಕ್ಕಿಗೆ" ಬೆಂಬಲ ಕ್ರೋಢೀಕರಿಸುವ ಅಮೆರಿಕ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಜತೆಗೆ ಅಮ್ಮಾನ್ ನಲ್ಲಿ ನಡೆಯಬೇಕಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಅರಬ್ ಮುಖಂಡರ ಸಭೆಯೂ ರದ್ದಾಗಿದೆ.
ಈ ಭೀಕರ ಸ್ಪೋಟದಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದ್ದು, ಹಮಾಸ್ ಹಾಗೂ ಇಸ್ರೇಲ್ ಈ ಬಗ್ಗೆ ಪರಸ್ಪರ ದೋಷಾರೋಪ ಮಾಡಿಕೊಂಡಿವೆ. ಇಸ್ರೇಲ್ ಗೆ ಬೆಂಬಲ ನೀಡುವ ಉದ್ದೇಶದಿಂದ ಬೈಡೆನ್ ಇಂದು ಇಸ್ರೇಲ್ ಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.
ಜೋರ್ಡಾನ್ ವಿದೇಶಾಂಗ ವ್ಯವಹಾರಗಳ ಸಚಿವ ಐಮನ್ ಸಫಾದಿ ಹೇಳಿಕೆ ನೀಡಿ, ಜೋರ್ಡಾನ್ ದೊರೆ ಅಬ್ದುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತೇಹ್ ಎಲ್ ಸೀಸಿ ಮತ್ತು ಫೆಲಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರು ಬೈಡೆನ್ ಜತೆ ಬುಧವಾರ ಅಮ್ಮಾನ್ ನಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆ ರದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 7ರಂದು 1300 ಮಂದಿಯನ್ನು ಹತ್ಯೆ ಮಾಡಿದ ಹಮಾಸ್ ಸಂಘಟನೆಯನ್ನು ನಿರ್ಮೂಲನೆ ಮಾಡುವ ಇಸ್ರೇಲ್ ಪ್ರಯತ್ನಕ್ಕೆ ಬೈಡೆನ್ ಬೆಂಬಲ ನೀಡಿದ್ದಾರೆ. ಈ ದಾಳಿಯಲ್ಲಿ 1300 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲಿನ 250 ಮಂದಿಯನ್ನು ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರೆ, ಹಮಾಸ್ ನ 200 ಮಂದಿ ಇಸ್ರೇಲ್ ಸೆರೆಯಲ್ಲಿದ್ದಾರೆ.







