ಪಾಕಿಸ್ತಾನ ಸರಕಾರದ ವಿರುದ್ಧ ಬಿಲಾವಲ್ ಭುಟ್ಟೋ ವಾಗ್ದಾಳಿ

ಬಿಲಾವಲ್ ಭುಟ್ಟೋ | Photo Credit : AP
ಪೇಶಾವರ, ನ.20: ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರು ದೇಶದ ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಲಪ್ರಯೋಗ ಅಥವಾ ಜನಮತಗಣನೆಯ ಮೂಲಕ ಸಿಂಧ್ ಪ್ರಾಂತವನ್ನು ವಿಭಜಿಸುವ ಯಾವುದೇ ಪ್ರಯತ್ನದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಸಿಂಧ್ ಅನ್ನು ವಿಭಜಿಸಲು ಬಲವಂತದ ಕ್ರಮ ಕೈಗೊಂಡರೆ ಅದು ವ್ಯಾಪಕ ಅಶಾಂತಿಗೆ ಕಾರಣವಾಗಬಹುದು ಮತ್ತು ಅದರ ಪರಿಣಾಮಗಳನ್ನು ದಶಕಗಳ ಕಾಲ ನಿಯಂತ್ರಿಸುವುದು ಕಷ್ಟವಾಗಬಹುದು. ಸರಕಾರವು ಬಲಪ್ರಯೋಗ ಅಥವಾ ಜನಮತಗಣನೆಯ ಮೂಲಕ ತನ್ನ ನಿರ್ಧಾರವನ್ನು ಹೇರಲು ಪ್ರಯತ್ನಿಸಿದರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಹೊಸ ಪ್ರಾಂತಗಳನ್ನು ರಚಿಸಲು ಪಾಕಿಸ್ತಾನದ ಸಂವಿಧಾನದಲ್ಲಿ ಈಗಾಗಲೇ ಸ್ಪಷ್ಟ ಕಾರ್ಯವಿಧಾನವಿದೆ ಮತ್ತು ಅಂತಹ ಯಾವುದೇ ನಡೆಯು ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಬೇಕು. ಒಮ್ಮತವಿಲ್ಲದೆ ಸಿಂಧ್ ನ ಗಡಿಗಳನ್ನು ಪುನರ್ರಚಿಸುವ ಯಾವುದೇ ಪ್ರಯತ್ನವು ಗಂಭೀರ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳಿಗೆ ದಾರಿಮಾಡಿಕೊಡಲಿದೆ ಎಂದು ಭುಟ್ಟೋ ಎಚ್ಚರಿಸಿದ್ದಾರೆ.




