ಮೊದಲ ಮತದಾನದಲ್ಲಿ ಪೋಪ್ ಆಯ್ಕೆಯಾಗಿಲ್ಲ ಎಂದು ಸೂಚಿಸಿದ ಸಿಸ್ಟಿನ್ ಚಾಪೆಲ್ನ ಕಪ್ಪುಹೊಗೆ

PC : NDTV
ವ್ಯಾಟಿಕನ್ ಸಿಟಿ: ಬುಧವಾರ ವ್ಯಾಟಿಕನ್ನ ಸಿಸ್ಟಿನ್ ಚಾಪೆಲ್ನ ಚಿಮಣಿಯಿಂದ ಕಪ್ಪು ಹೊಗೆ ಹೊರಹೊಮ್ಮಿದ್ದು, ಇದು ನೂತನ ಪೋಪ್ ಆಯ್ಕೆಯಾಗಿಲ್ಲ ಎನ್ನುವುದನ್ನು ಸೂಚಿಸಿದೆ. ಕ್ಯಾಥೊಲಿಕ್ ಚರ್ಚ್ನ ನೂತನ ನಾಯಕನನ್ನು ಆಯ್ಕೆ ಮಾಡಲು 133 ಕಾರ್ಡಿನಲ್ಗಳು ರಹಸ್ಯವಾದ, ಶತಮಾನಗಳಷ್ಟು ಹಳೆಯದಾದ ಸಂಪ್ರದಾಯಕ್ಕೆ ಬುಧವಾರ ಚಾಲನೆ ನೀಡಿದ್ದರು.
ಕ್ರೈಸ್ತ ಧರ್ಮದ ಇತಿಹಾಸದಲ್ಲಿಯೇ ಭೌಗೋಳಿಕವಾಗಿ ಅತ್ಯಂತ ವೈವಿಧ್ಯಮಯ ಸಮಾವೇಶದಲ್ಲಿ ಪಾಲ್ಗೊಂಡಿರುವ ಕಾರ್ಡಿನಲ್ಗಳು ಬುಧವಾರ ಸಂಜೆ ಕೇವಲ ಒಂದು ಸುತ್ತಿನ ಮತದಾನವನ್ನು ನಡೆಸಿದ್ದಾರೆ. ಮೊದಲ ಮತದಾನದಲ್ಲಿ ದಿವಂಗತ ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಲ್ಲಿ ವಿಫಲಗೊಂಡ ಬಳಿಕ ಕಾರ್ಡಿನಲ್ಗಳು ಗುರುವಾರ ಬೆಳಿಗ್ಗೆ ಪ್ರಕ್ರಿಯೆಯನ್ನು ಪುನರಾರಂಭಿಸಿದ್ದಾರೆ.
ಚಾಪೆಲ್ನ ಹೊರಗೆ ಸೈಂಟ್ ಪೀಟರ್ಸ್ ಚೌಕದಲ್ಲಿ ಕಲಾಪಗಳನ್ನು ದೈತ್ಯಾಕಾರದ ವೀಡಿಯೊ ಪರದೆಗಳಲ್ಲಿ ವೀಕ್ಷಿಸಲು ಸಾವಿರಾರು ಜನರು ನೆರೆದಿದ್ದಾರೆ. ಗಂಟೆಗಟ್ಟಲೆ ಕಾದ ಬಳಿಕ ಮತದಾನವು ಭೋಜನ ಸಮಯಕ್ಕೆ ವಿಸ್ತರಿಸಲ್ಪಟ್ಟ ನಂತರ ಕೆಲವರು ಹತಾಶೆಯಿಂದ ಮರಳಿದ್ದಾರೆ,ಅಲ್ಲಿಯೇ ಉಳಿದುಕೊಂಡಿದ್ದವರು ಅಂತಿಮವಾಗಿ ಹೊಗೆಯು ಚಿಮಣಿಯಿಂದ ಹೊರಸೂಸಿದ್ದಕ್ಕೆ ಸಾಕ್ಷಿಯಾಗಿದ್ದರು
‘ಕಾರ್ಡಿನಲ್ಗಳು ಶಾಂತಿದೂತನಾಗಬಲ್ಲ ಮತ್ತು ಚರ್ಚ್ ಅನ್ನು ಮತ್ತೆ ಒಗ್ಗೂಡಿಸಬಲ್ಲ ವ್ಯಕ್ತಿಯನ್ನು ನೂತನ ಪೋಪ್ ಆಗಿ ಆಯ್ಕೆ ಮಾಡುತ್ತಾರೆ ಎಂಬ ಆಶಯವನ್ನು ನಾನು ಹೊಂದಿದ್ದೇನೆ’ ಎಂದು ಲಂಡನ್ನಿಂದ ಆಗಮಿಸಿರುವ ಗ್ಯಾಬ್ರಿಯಲ್ ಕಾಪ್ರಿ (27) ಹೇಳಿದರು.







