Pakistan | ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಮಸೀದಿ ಬಳಿ ಆತ್ಮಹತ್ಯಾ ದಾಳಿ, ಕಾರು ಬಾಂಬ್ ಸ್ಫೋಟ; ಕನಿಷ್ಠ 16 ಮಂದಿ ಮೃತ್ಯು

Screengrab : X
ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಕೊಹಾಟ್ ನಗರದಲ್ಲಿ ಶುಕ್ರವಾರ ಸ್ಫೋಟಕ ತುಂಬಿದ ವಾಹನವೊಂದು ಪೊಲೀಸ್ ಕೇಂದ್ರದ ಗೇಟ್ ಗೆ ಢಿಕ್ಕಿ ಹೊಡೆದ ಪರಿಣಾಮ 16 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಪೊಲೀಸ್ ಸಿಬ್ಬಂದಿ. ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಈ ದಾಳಿ ಕೊಹಾಟ್ ನ ‘ಓಲ್ಡ್ ಪೊಲೀಸ್ ಲೈನ್ಸ್’ ಬಳಿ ನಡೆದಿದೆ. ಪೊಲೀಸ್ ಕೇಂದ್ರದ ಆವರಣದೊಳಗೆ ಮಸೀದಿಯಿದೆ. ಪೊಲೀಸ್ ಸಿಬ್ಬಂದಿ, ಅವರ ಕುಟುಂಬದವರು ಮತ್ತು ಇತರ ನಾಗರಿಕರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಮಯದಲ್ಲಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯಾ ದಾಳಿಕೋರನೊಬ್ಬ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಪೊಲೀಸ್ ಕೇಂದ್ರದ ಹೊರಗೋಡೆಗೆ ಢಿಕ್ಕಿ ಹೊಡೆಸಿದ್ದಾನೆ. ಢಿಕ್ಕಿಯ ಬಳಿಕ ಭಾರಿ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಮಸೀದಿಯ ಹೊರಭಾಗಕ್ಕೆ ಹಾನಿಯಾಗಿದೆ. ಗೋಡೆಯ ಒಂದು ಭಾಗ ಕುಸಿದುಬಿದ್ದಿದೆ. ಮಸೀದಿಯ ಹೊರಗೆ ದೊಡ್ಡ ಗುಂಡಿ (ಕ್ರೇಟರ್) ನಿರ್ಮಾಣವಾಗಿದೆ. ಹತ್ತಿರದ ಕಟ್ಟಡಗಳಿಗೂ ಹಾನಿಯಾಗಿದೆ. ಸ್ಫೋಟದ ಸ್ಥಳದಲ್ಲಿ ಆಟೊ ರಿಕ್ಷಾದ ಅವಶೇಷಗಳು ಕಂಡುಬಂದಿವೆ.
► ದಾಳಿಕೋರರೊಂದಿಗೆ ಗುಂಡಿನ ಚಕಮಕಿ
ಸ್ಫೋಟದ ಬಳಿಕ ವಾಹನದೊಂದಿಗೆ ಬಂದಿದ್ದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದರು. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ ಪರಿಣಾಮ ಎರಡೂ ಕಡೆಯವರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ಫೋಟದ ನಂತರವೂ ಗುಂಡಿನ ಚಕಮಕಿ ಮುಂದುವರಿಯಿತು. ಸ್ಫೋಟಕ ತುಂಬಿದ ಜಾಕೆಟ್ ಧರಿಸಿದ್ದ ಒಬ್ಬ ದಾಳಿಕೋರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೈಬರ್ ಪಖ್ತುಂಕ್ವಾ ಪೊಲೀಸ್ ಮುಖ್ಯಸ್ಥ ಝುಲ್ಫಿಕರ್ ಹಮೀದ್ ಅವರು ಇದು ಆತ್ಮಹತ್ಯಾ ದಾಳಿ ಎಂದು ತಿಳಿಸಿದ್ದಾರೆ.
ಪೊಲೀಸ್ ಲೈನ್ಸ್ ಆವರಣದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ತಕ್ಷಣಕ್ಕೆ ಹೊತ್ತುಕೊಂಡಿಲ್ಲ.
ಸ್ಫೋಟದ ಬಳಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದವು ಎಂದು ತಿಳಿದು ಬಂದಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು ಆಸ್ಪತ್ರೆಗೆ ಬಂದ ಹಿನ್ನೆಲೆಯಲ್ಲಿ ಕೊಹಾಟ್ ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಯು ತುರ್ತು ಪರಿಸ್ಥಿತಿ ಘೋಷಿಸಿತು. ಡಝನ್ಗಟ್ಟಲೆ ಜನರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ರಕ್ಷಣಾ ಕಾರ್ಯಾಚರಣೆಗಾಗಿ ಆಂಬ್ಯುಲೆನ್ಸ್ ಗಳು, 40ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶೋಧ ಮತ್ತು ತೆರವು ಕಾರ್ಯಾಚರಣೆ ಮುಂದುವರಿದಿದೆ. ಅಧಿಕಾರಿಗಳು ಹಳೆಯ ಪೊಲೀಸ್ ಲೈನ್ಸ್ ಪ್ರದೇಶವನ್ನು ಸುತ್ತುವರಿದಿದ್ದಾರೆ. ಕೊಹಾಟ್–ಹಂಗು ರಸ್ತೆಯ ಸಂಚಾರವನ್ನೂ ಬಂದ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜರ್ದಾರಿ, ಷರೀಫ್ ಖಂಡನೆ
ಪಾಕಿಸ್ತಾನದ ಆಂತರಿಕ ಸಚಿವಾಲಯ ದಾಳಿಯನ್ನು ಖಂಡಿಸಿದೆ. ದಾಳಿಕೋರರ ಕ್ರಮಗಳು ದೇಶದ ಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.
ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಾವುನೋವುಗಳಿಗೆ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ, ವಿಶೇಷವಾಗಿ ಖೈಬರ್ ಪಖ್ತುಂಕ್ವಾದಲ್ಲಿ ಉಗ್ರಗಾಮಿ ಚಟುವಟಿಕೆಗಳು, ಹಿಂಸಾಚಾರ ತೀವ್ರವಾಗಿ ಹೆಚ್ಚಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ಹೆಚ್ಚಾಗಿ ಉಗ್ರರ ಗುರಿಯಾಗುತ್ತಿದ್ದಾರೆ.
ಪಾಕಿಸ್ತಾನದಲ್ಲಿ ದಾಳಿ ನಡೆಸಲು ಉಗ್ರಗಾಮಿಗಳು ಅಫ್ಘಾನಿಸ್ತಾನದಲ್ಲಿರುವ ಸುರಕ್ಷಿತ ತಾಣಗಳನ್ನು ಬಳಸುತ್ತಿದ್ದಾರೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ. ದಾಳಿಗಳಿಗೆ ತರಬೇತಿ ಪಡೆಯಲು ಮತ್ತು ಯೋಜನೆ ರೂಪಿಸಲು ಈ ತಾಣಗಳನ್ನು ಬಳಸಲಾಗುತ್ತಿದೆ ಎಂದೂ ಪಾಕಿಸ್ತಾನ ಹೇಳಿದೆ.
ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.






