ಬಾಂಬ್ ಬೆದರಿಕೆ ಕರೆ: ಯುರೋಪ್ನ ವಿವಿಧೆಡೆ ಹಲವು ವಿಮಾನಗಳು ತುರ್ತು ಲ್ಯಾಂಡಿಂಗ್

Photo Credit : X
ಪ್ಯಾರಿಸ್: ಸರಣಿ ಬಾಂಬ್ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಯುರೋಪ್ನ ವಿವಿಧೆಡೆ ಹಲವಾರು ವಿಮಾನಗಳು ತುರ್ತು ಲ್ಯಾಂಡಿಂಗ್ ಮಾಡಿವೆ ಮತ್ತು ಕೆಲವು ವಿಮಾನಗಳು ತಮ್ಮ ಮಾರ್ಗವನ್ನು ಬದಲಾಯಿಸಿವೆ. ಕೋಪನ್ಹೇಗನ್, ಡಬ್ಲಿನ್, ಹೆಲ್ಸಿಂಕಿ, ಮ್ಯಾಡ್ರಿಡ್, ಮಿಲಾನ್ ಹಾಗೂ ವಾರ್ಸಾದಿಂದ ಹೊರಟಿದ್ದ ಕನಿಷ್ಠ ಎಂಟು ವಿಮಾನಗಳನ್ನು ಗುರಿಯಾಗಿರಿಸಿ ಈ ಬೆದರಿಕೆ ಕರೆಗಳು ಬಂದಿದ್ದವು. ಈ ಪೈಕಿ ಹಲವಾರು ವಿಮಾನಗಳು ಇತರ ವಿಮಾನ ನಿಲ್ದಾಣಗಳಲ್ಲಿ ತುರ್ತಾಗಿ ಇಳಿದಿದ್ದರೆ, ಇನ್ನು ಕೆಲವು ಅವುಗಳ ಗಮ್ಯ ಸ್ಥಳಗಳಲ್ಲೇ ಸುರಕ್ಷಿತವಾಗಿ ಇಳಿದಿವೆ.
ಆದರೆ ಯಾವುದೇ ವಿಮಾನಗಳಲ್ಲಿ ಅಪಾಯಕಾರಿ ಅಥವಾ ಶಂಕಾಸ್ಪದ ಸಾಮಾಗ್ರಿಗಳು ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಡಬ್ಲಿನ್ನಿಂದ ರೋಮ್ಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಫ್ರಾನ್ಸ್ನ ನೊರ್ಮಾಂಡಿಯಲ್ಲಿರುವ ಎವೆರಿಯುಕ್ಸ್ಸೇನಾ ನೆಲೆಗೆ ತಿರುಗಿಸಲಾಯಿತು. ಅದರಲ್ಲಿದ್ದ ಎಲ್ಲಾ 151 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲಾಯಿತು. ಬಾಂಬ್ ನಿಷ್ಕ್ರಿಯ ತಂಡಗಳು ವಿಮಾನದ ತಪಾಸಣೆ ನಡೆಸಿದವು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದೇ ವೇಳೆ ಬಲ್ಗೇರಿಯದಿಂದ ಸೋಫಿಯಾಗೆ ತೆರಳುತ್ತಿದ್ದ ಮೂರು ರಿಯಾನ್ಏರ್ ವಿಮಾನಗಳು ಸೇರಿದಂತೆ, ವಿಝ್ ಏರ್, ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಹಾಗೂ ಪೊಲೀಶ್ ಏರ್ಲೈನ್ ಎಲ್ಓಟಿ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಆದರೆ ಯಾವುದೇ ಪ್ರಕರಣಗಳಲ್ಲೂ ಸ್ಫೋಟಕಗಳು ಪತ್ತೆಯಾಗದೆ, ಹುಸಿಬಾಂಬ್ ಬೆದರಿಕೆ ಕರೆಗಳೆಂದು ದೃಢಪಟ್ಟಿದೆ.






