Brazil | ಟ್ರಂಪ್ರ ಪ್ರಬಲ ಟೀಕಾಕಾರ ಲೂಯಿಝ್ ಇನಾಸಿಯೊ ಲುಲಾ ಡ ಸಿಲ್ವಾ 4ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ
ಫ್ಲೇವಿಯೊ ಬೋಲ್ಸನಾರೊಗೆ ಸೋಲು; ಶೇ.51.75ರಷ್ಟು ಮತ ಗಳಿಸಿದ ಲುಲಾ

Photo credit : PTI
ಬ್ರೆಸಿಲಿಯಾ, ಅ. 26: ಬ್ರೆಝಿಲ್ ನ ಎಡಪಂಥೀಯ ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ರವಿವಾರ ನಡೆದ ಚುನಾವಣೆಯಲ್ಲಿ ಬಲಪಂಥೀಯ ಸೆನೆಟರ್ ಫ್ಲೇವಿಯೊ ಬೋಲ್ಸನಾರೊ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಲುಲಾ, ಎರಡನೇ ಸುತ್ತಿನಲ್ಲಿ ಗೆಲುವು ದಾಖಲಿಸುವ ಮೂಲಕ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂಗಳವಾರ 81ನೇ ವರ್ಷಕ್ಕೆ ಕಾಲಿಡಲಿರುವ ಲುಲಾ, ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶದ ಚುಕ್ಕಾಣಿ ಹಿಡಿಯಲು ಮತ್ತೊಮ್ಮೆ ಜನಾದೇಶ ಪಡೆದಿದ್ದಾರೆ. ಅಧಿಕೃತ ಫಲಿತಾಂಶಗಳ ಪ್ರಕಾರ, ಅವರು ಶೇ. 51.75ರಷ್ಟು ಮತಗಳನ್ನು ಗಳಿಸಿದರೆ, ಮಾಜಿ ಬಲಪಂಥೀಯ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಪುತ್ರ ಫ್ಲೇವಿಯೊ ಶೇ 48.25ರಷ್ಟು ಮತ ಪಡೆದಿದ್ದಾರೆ. ಚುನಾವಣೆಯಲ್ಲಿ ಗೆಲುವಿನ ಬಗ್ಗೆ ವಿಶ್ವಾಸ ಹೊಂದಿದ್ದ ಫ್ಲೇವಿಯೊಗೆ ಅಂತಿಮವಾಗಿ ಹಿನ್ನಡೆಯಾಗಿದೆ.
ಲುಲಾ ಗೆಲುವಿನೊಂದಿಗೆ ಬ್ರೆಝಿಲ್ ನಲ್ಲಿ ಬಲಪಂಥೀಯ ರಾಜಕೀಯ ಅಲೆಗೆ ತಡೆಯುಂಟಾಗಿದೆ. ಅರ್ಜೆಂಟೀನಾ, ಚಿಲಿ, ಕೊಲಂಬಿಯಾ ಮತ್ತು ಪೆರು ಸೇರಿದಂತೆ ಲ್ಯಾಟಿನ್ ಅಮೆರಿಕದ ಹಲವು ದೇಶಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲದೊಂದಿಗೆ ಬಲಪಂಥೀಯ ರಾಜಕೀಯದತ್ತ ಮುಖ ಮಾಡಿರುವ ಸಂದರ್ಭದಲ್ಲಿ ಬ್ರೆಝಿಲ್ನ ಫಲಿತಾಂಶ ಮಹತ್ವ ಪಡೆದಿದೆ.
ಮತದಾನದ ಅವಧಿ ವಿಸ್ತರಣೆ ವಿವಾದ :
ಹಗರಣಗಳು ಮತ್ತು ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಕೂಡಿದ್ದ ಚುನಾವಣಾ ಪ್ರಚಾರದ ಬಳಿಕ ರವಿವಾರದ ಮತದಾನವೂ ವಿವಾದಕ್ಕೆ ಕಾರಣವಾಯಿತು. ಸುಪ್ರೀಂ ಕೋರ್ಟ್ ಕೊನೆಯ ಕ್ಷಣದಲ್ಲಿ ಮತದಾನದ ಅವಧಿಯನ್ನು ಎರಡು ಗಂಟೆಗಳ ಕಾಲ ವಿಸ್ತರಿಸಿತ್ತು. ವಿವಿಧ ನಗರಗಳಲ್ಲಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ನಾಗರಿಕರಿಗೆ ಮತ ಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲುಲಾ ಆರೋಪಿಸಿದ್ದರು.
ಭಾರೀ ಮಳೆಯಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಮತದಾನದ ಅವಧಿಯನ್ನು ವಿಸ್ತರಿಸುವಂತೆ ಫ್ಲೇವಿಯೊ ಬೋಲ್ಸನಾರೊ ಕೋರಿದ್ದರು. ಆದರೆ, ದೇಶಾದ್ಯಂತ ಮತದಾನದ ಅವಧಿ ವಿಸ್ತರಿಸಿದ ನಿರ್ಧಾರವನ್ನು ಅವರ ಚುನಾವಣಾ ಪ್ರಚಾರ ತಂಡ ಟೀಕಿಸಿತ್ತು.
‘ನಾವು ಗೆಲ್ಲುತ್ತೇವೆ. ಗೆದ್ದೇ ಗೆಲ್ಲುತ್ತೇವೆ. ಇದನ್ನು ನೆನಪಿಟ್ಟುಕೊಳ್ಳಿ’ ಎಂದು ಬೋಲ್ಸನಾರೊ ಬೆಂಬಲಿಗ ನಿಕೋಲಸ್ ಫೆರೇರಾ ಅವರು ಮತ ಎಣಿಕೆ ನಡೆಯುತ್ತಿದ್ದಾಗ ಸಾಮಾಜಿಕ ಮಾಧ್ಯಮ Xನಲ್ಲಿ ಬರೆದಿದ್ದರು.
200 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಬ್ರೆಝಿಲ್ ನಲ್ಲಿ ನಡೆದ ತೀವ್ರ ಪೈಪೋಟಿಯ ಚುನಾವಣಾ ಪ್ರಚಾರವು ದೇಶದಲ್ಲಿನ ಆಳವಾದ ರಾಜಕೀಯ ವಿಭಜನೆಯನ್ನು ಬಯಲು ಮಾಡಿತ್ತು.
ಬಿರುಸಿನ ಪ್ರಚಾರದಿಂದ ಪುನರಾಗಮನ :
ಕಳೆದ ನಾಲ್ಕು ದಶಕಗಳಿಂದ ಬ್ರೆಝಿಲ್ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಲುಲಾ, ಮೊದಲ ಸುತ್ತಿನಲ್ಲಿ ಬೋಲ್ಸನಾರೊ ವಿರುದ್ಧ ಹಿನ್ನಡೆ ಅನುಭವಿಸಿದ ಬಳಿಕ ಪ್ರಚಾರದ ಕಾರ್ಯತಂತ್ರ ಬದಲಿಸಿಕೊಂಡರು.
‘ಮತ್ತೆಂದಿಗೂ ಬೋಲ್ಸನಾರೊ ಬೇಡ’ ಎಂಬ ಘೋಷಣೆಯೊಂದಿಗೆ ಎಡಪಂಥೀಯರು ಬೃಹತ್ ರ್ಯಾಲಿಗಳನ್ನು ನಡೆಸಿದರು. ಕೋವಿಡ್ ಸಾಂಕ್ರಾಮಿಕವನ್ನು ಜೈರ್ ಬೋಲ್ಸನಾರೊ ಸರಕಾರ ನಿರ್ವಹಿಸಿದ ರೀತಿ, ಅಮೆಝಾನ್ ಮಳೆಕಾಡಿನ ನಾಶ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾಡಿದ್ದ ಕಡಿತಗಳನ್ನು ಪ್ರತಿಭಟನಾಕಾರರು ಪ್ರಸ್ತಾಪಿಸಿದರು.
ಲುಲಾ ಸಾಮಾಜಿಕ ಮಾಧ್ಯಮದ ಕಾರ್ಯತಂತ್ರವನ್ನೂ ಪರಿಷ್ಕರಿಸಿದರು. ವೀಡಿಯೊ ಸೆಲ್ಫಿಗಳನ್ನು ಚಿತ್ರೀಕರಿಸಿ ಹಂಚಿಕೊಂಡ ಅವರು, ತಮ್ಮ ಮೊದಲ ಮೊಬೈಲ್ ಫೋನ್ ಅನ್ನೂ ಖರೀದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ, ಬೆಂಬಲಿಗರು ಕುಟುಂಬದವರು, ಸ್ನೇಹಿತರು ಮತ್ತು ನೆರೆಹೊರೆಯವರ ಮನವೊಲಿಸಿ ಮತಗಟ್ಟೆಗೆ ಕರೆತರುವ ಅಭಿಯಾನ ನಡೆಸಿದರು.
ಬಡ ರೈತ ಕುಟುಂಬದಲ್ಲಿ ಈಶಾನ್ಯ ಬ್ರೆಝಿಲ್ ನಲ್ಲಿ ಬೆಳೆದ ಲುಲಾ ಅವರ ಮರು ಆಯ್ಕೆಯು ಮತ್ತೊಂದು ಗಮನಾರ್ಹ ರಾಜಕೀಯ ಪುನರಾಗಮನವಾಗಿದೆ. ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅವರು ಹೆಸರುವಾಸಿಯಾಗಿದ್ದಾರೆ.
2022ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಮರಳಿದ್ದ ಅವರು, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ 18 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಅವರ ವಿರುದ್ಧದ ಆರೋಪಗಳನ್ನು ಕಾರ್ಯವಿಧಾನಕ್ಕೆ ಸಂಬಂಧಿಸಿದ ಕಾರಣಗಳ ಆಧಾರದಲ್ಲಿ ರದ್ದುಗೊಳಿಸಲಾಗಿತ್ತು. ಆದರೂ, ಆ ವಿವಾದಗಳು ಅವರನ್ನು ರಾಜಕೀಯವಾಗಿ ಕಾಡುತ್ತಲೇ ಇವೆ.
ಆರ್ಥಿಕತೆ, ಸುರಕ್ಷತೆ ಸವಾಲು :
ಮೂರನೇ ಅವಧಿಯಲ್ಲಿ ಲುಲಾ ಹಣದುಬ್ಬರ ಮತ್ತು ನಿರುದ್ಯೋಗ ಇಳಿಕೆಯಾಗುವುದನ್ನು ಕಂಡಿದ್ದಾರೆ. ಲಕ್ಷಾಂತರ ಜನರನ್ನು ಹಸಿವಿನಿಂದ ಹೊರತರುವಲ್ಲಿ ಅವರ ಸರಕಾರದ ಕಾರ್ಯಕ್ರಮಗಳು ನೆರವಾಗಿವೆ. ಆದರೆ, ಜೀವನ ವೆಚ್ಚದ ಏರಿಕೆ ಮತ್ತು ಸುರಕ್ಷತೆಯ ಕೊರತೆ ಕುರಿತು ಮತದಾರರಲ್ಲಿ ಅಸಮಾಧಾನ ಮುಂದುವರಿದಿದೆ.
ಚುನಾವಣಾ ಪ್ರಚಾರದ ವೇಳೆ ಕಲ್ಯಾಣ ಕಾರ್ಯಕ್ರಮಗಳ ವಿಸ್ತರಣೆ ಪ್ರಮುಖ ಚರ್ಚೆಯ ವಿಷಯವಾಗಿತ್ತು.
‘ಬ್ರೆಝಿಲ್ಗೆ ಲುಲಾ ಅವರ ಆಡಳಿತ ಇನ್ನಷ್ಟು ಕಾಲ ಬೇಕು. ಮುಖ್ಯವಾಗಿ, ದೇಶ ಫ್ಯಾಸಿಸಂನ ಹಿಡಿತಕ್ಕೆ ಸಿಲುಕುವ ಅಂಚಿನಲ್ಲಿದೆ’ ಎಂದು 21 ವರ್ಷದ ಸಂಪಾದಕೀಯ ಸಹಾಯಕಿ ಮಾರಿಯಾ ಫೆರ್ನಾಂಡಾ ಎಲಿಸ್ಬಾವೊ AFPಗೆ ತಿಳಿಸಿದರು.
ಆದರೆ, ದೇಶದ ಅರ್ಧದಷ್ಟು ಮತದಾರರು ಲುಲಾ ವಿರುದ್ಧ ಮತ ಚಲಾಯಿಸಿದ್ದು, ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ ಎಂಬುದನ್ನು ಫಲಿತಾಂಶ ತೋರಿಸಿದೆ.
‘ನಾವು ತೀವ್ರ ಸಂಕಷ್ಟದಲ್ಲಿದ್ದೇವೆ. ಪರಿಸ್ಥಿತಿ ಗಂಭೀರವಾಗಿದೆ. ಜನರಿಗೆ ಹೊಟ್ಟೆ ತುಂಬ ಊಟ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಇನ್ನು ಮಾಂಸ ಖರೀದಿಸುವ ಮಾತೇ ಇಲ್ಲ’ ಎಂದು ರಿಯೊ ಡಿ ಜನೈರೊದಲ್ಲಿ ಮತ ಚಲಾಯಿಸಿದ 68 ವರ್ಷದ ನಿವೃತ್ತೆ ತೆರೆಜಾ ಕ್ರಿಸ್ಟಿನಾ ರಾಮೋಸ್ ಹೇಳಿದರು.
ವಯಸ್ಸು, ರಾಜಕೀಯ ವಿರೋಧದ ಸವಾಲು :
ಈಗಾಗಲೇ ವಿಶ್ವದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಲುಲಾ, 2030ರಲ್ಲಿ ತಮ್ಮ ಹೊಸ ಅಧಿಕಾರಾವಧಿ ಪೂರ್ಣಗೊಳ್ಳುವ ವೇಳೆಗೆ 85 ವರ್ಷ ವಯಸ್ಸಿನವರಾಗಿರುತ್ತಾರೆ. 2003ರಿಂದ 2010ರವರೆಗೆ ಅವರು ಅಧ್ಯಕ್ಷರಾಗಿದ್ದರು. ಹೊಸ ಅವಧಿಯೂ ಪೂರ್ಣಗೊಂಡರೆ ಒಟ್ಟು 16 ವರ್ಷಗಳ ಕಾಲ ಅಧ್ಯಕ್ಷರಾಗಿದ್ದಂತಾಗುತ್ತದೆ.
ಇದರ ಜತೆಗೆ, ಬಲಪಂಥೀಯರ ಪ್ರಾಬಲ್ಯವಿರುವ ಮತ್ತು ಲುಲಾ ಅವರಿಗೆ ಪ್ರತಿಕೂಲವಾಗಿರುವ ಕಾಂಗ್ರೆಸ್ ನ (ಶಾಸಕಾಂಗ) ವಿರೋಧವನ್ನೂ ಅವರು ಎದುರಿಸಬೇಕಿದೆ.
ಆರ್ಥಿಕ ಬೆಳವಣಿಗೆ ನಿಧಾನಗೊಳ್ಳುವ ನಿರೀಕ್ಷೆಯಿರುವುದರಿಂದ ಆರ್ಥಿಕ ಪರಿಸ್ಥಿತಿಯೂ ಅವರ ನೀತಿ ನಿರ್ಧಾರಗಳಿಗೆ ಮಿತಿಯೊಡ್ಡಲಿದೆ. ಕಾರ್ಮಿಕ ವರ್ಗದ ಜನರು ವಾಸಿಸುವ ಬಡಾವಣೆಗಳಲ್ಲಿ ಭೀತಿ ಸೃಷ್ಟಿಸುತ್ತಿರುವ ಅಪರಾಧ ಗುಂಪುಗಳ ಹಾವಳಿಯಿಂದಾಗಿ, ದೇಶದಲ್ಲಿ ವ್ಯಾಪಕವಾಗಿರುವ ಅಭದ್ರತೆಯನ್ನು ನಿಯಂತ್ರಿಸುವಂತೆ ಲುಲಾ ಅವರ ಮೇಲೆ ಒತ್ತಡ ಹೆಚ್ಚಾಗಿದೆ.
ಸಾರ್ವಭೌಮತ್ವಕ್ಕೆ ಒತ್ತು :
ಟ್ರಂಪ್ ನೇತೃತ್ವದ ಅಮೆರಿಕದಿಂದ ಎದುರಾಗಿರುವ ವ್ಯಾಪಾರ ಮತ್ತು ರಾಜತಾಂತ್ರಿಕ ಒತ್ತಡಗಳ ಹಿನ್ನೆಲೆಯಲ್ಲಿ, ಚುನಾವಣಾ ಪ್ರಚಾರದಲ್ಲಿ ಲುಲಾ ಅವರು ಬ್ರೆಝಿಲ್ ನ ಸಾರ್ವಭೌಮತ್ವದ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು.
‘ಬ್ರೆಝಿಲ್ ನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ನಾಯಕನನ್ನು ಮತದಾರರು ಆಯ್ಕೆ ಮಾಡಬೇಕು’ ಎಂದು ಲುಲಾ ಹೇಳಿದರು. ಸತತ ಚುನಾವಣಾ ಪ್ರಚಾರದಿಂದಾಗಿ ಅವರ ಧ್ವನಿ ಕ್ಷೀಣಿಸಿತ್ತು.
ತಮ್ಮ ಪ್ರತಿಸ್ಪರ್ಧಿ ‘ಅಮೆರಿಕದ ಧ್ವಜವನ್ನು ಹಿಡಿದುಕೊಂಡು ಆಡಳಿತ ನಡೆಸಲು’ ಬಯಸುತ್ತಿದ್ದಾರೆ ಎಂದು ಲುಲಾ ಆರೋಪಿಸಿದ್ದರು.






