ಸಿರಿಯಾ ಅಧ್ಯಕ್ಷರ ಮೇಲಿನ ಬ್ರಿಟನ್ ನಿರ್ಬಂಧ ತೆರವು

Photo: @BBCWorld
ಲಂಡನ್, ನ.8: ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಮೇಲಿನ ನಿರ್ಬಂಧವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರದ್ದುಗೊಳಿಸಿದ ಮರು ದಿನವೇ ಬ್ರಿಟನ್ ಕೂಡಾ ಇದೇ ಕ್ರಮವನ್ನು ಘೋಷಿಸಿದೆ. ಇದೇ ವೇಳೆ, ತಾನೂ ಕೂಡಾ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ.
ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್ ಶರಾ ಮತ್ತು ಆಂತರಿಕ ಸಚಿವ ಅನಸ್ ಹಸನ್ ಖತ್ತಾಬ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವುದಾಗಿ ಬ್ರಿಟನ್ ಸರಕಾರದ ವೆಬ್ಸೈಟಿನಲ್ಲಿ ಪ್ರಕಟಿಸಲಾದ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಸಿರಿಯಾದ ಮೇಲಿನ ಕೆಲ ನಿರ್ಬಂಧಗಳನ್ನು ಬ್ರಿಟನ್ ಎಪ್ರಿಲ್ ನಲ್ಲಿ ತೆರವುಗೊಳಿಸಿದ್ದರೆ ಯುರೋಪಿಯನ್ ಯೂನಿಯನ್ ಮೇ ತಿಂಗಳಿನಲ್ಲಿ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಿತ್ತು. ಆದರೆ ಶಸ್ತ್ರಾಸ್ತ್ರ ಮತ್ತು ಭದ್ರತೆಗೆ ಸಂಬಂಧಿಸಿದ ನಿರ್ಬಂಧಗಳು ಜಾರಿಯಲ್ಲಿವೆ. `ವಿಶ್ವಸಂಸ್ಥೆಯ ನಿರ್ಧಾರವು ಯುರೋಪಿಯನ್ ಯೂನಿಯನ್ ಕ್ರಮಗಳಲ್ಲಿ ಪ್ರತಿಫಲಿಸುತ್ತದೆ. ಎಲ್ಲಾ ಸಿರಿಯನ್ನರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುವ ಶಾಂತಿಯುತ ಮತ್ತು ಅಂತರ್ಗತ ಸಿರಿಯನ್ ನೇತೃತ್ವದ ಪರಿವರ್ತನೆ ಪ್ರಕ್ರಿಯೆಯನ್ನು ಬೆಂಬಲಿಸಲು ನಾವು ಬದ್ಧವಾಗಿದ್ದೇವೆ ಎಂದು ಯುರೋಪಿಯನ್ ಕಮಿಷನ್ ವಕ್ತಾರರು ಹೇಳಿದ್ದಾರೆ.





