ಚಾಗೋಸ್ ದ್ವೀಪಗಳ ಒಪ್ಪಂದಕ್ಕೆ ಬ್ರಿಟನ್ ಸಹಿ

Photo: Thomas Krych/ Reuters
ಲಂಡನ್: ಮಾರಿಷಸ್ ಗೆ ಚಾಗೋಸ್ ದ್ವೀಪಗಳನ್ನು ಹಸ್ತಾಂತರಿಸುವ ಮತ್ತು ಡಿಯೆಗೊ ಗಾರ್ಸಿಯಾದಲ್ಲಿರುವ ಆಯಕಟ್ಟಿನ ಅಮೆರಿಕ-ಬ್ರಿಟನ್ ವಿಮಾನ ನೆಲೆಯ ಮೇಲಿನ ನಿಯಂತ್ರಣವನ್ನು ಬ್ರಿಟನ್ ಗೆ ವಹಿಸುವ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದೆ.
ಚಾಗೋಸ್ ದ್ವೀಪ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕೆ ಲಂಡನ್ ಹೈಕೋರ್ಟ್ ಅಂತಿಮ ಕ್ಷಣದಲ್ಲಿ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ನ್ಯಾಯಾಧೀಶರು ಗುರುವಾರ ತೆರವುಗೊಳಿಸಿದ ಬಳಿಕ ಒಪ್ಪಂದಕ್ಕೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಹಿ ಹಾಕಿರುವುದಾಗಿ ವರದಿಯಾಗಿದೆ. 99 ಮತ್ತು ಅದಕ್ಕೂ ಹೆಚ್ಚಿನ ಅವಧಿಗೆ ವಾಯುನೆಲೆಯನ್ನು ಲೀಸ್ ಗೆ ಪಡೆಯುವ ಒಪ್ಪಂದವು ಬ್ರಿಟನ್ ನ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಸ್ಟಾರ್ಮರ್ ಹೇಳಿದ್ದಾರೆ.
ಚಾಗೋಸ್ ದ್ವೀಪಗಳ ಸಾರ್ವಭೌಮತ್ವವನ್ನು ಮಾರಿಷಸ್ ಗೆ ಬಿಟ್ಟುಕೊಡಲು ಬಹು ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಬುಧವಾರ ಅಂತಿಮ ಕ್ಷಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಸರಕಾರ ಈ ಕುರಿತ ಘೋಷಣೆಯನ್ನು ಮುಂದೂಡಬೇಕಾಯಿತು. ಒಪ್ಪಂದವು 99 ವರ್ಷಗಳ ಲೀಸ್(ಗುತ್ತಿಗೆ)ನಡಿ ಹಿಂದು ಮಹಾಸಾಗರದ ಅತೀ ದೊಡ್ಡ ದ್ವೀಪ ಡಿಯೆಗೊ ಗಾರ್ಸಿಯಾದಲ್ಲಿ ಆಯಕಟ್ಟಿನ ಸೇನಾನೆಲೆಯ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳಲು ಬ್ರಿಟನ್ ಗೆ ಅನುವು ಮಾಡಿಕೊಡುತ್ತದೆ. ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶವನ್ನು ರಚಿಸಲು 1965ರಲ್ಲಿ ಮಾರಿಷಸ್ನಿಂದ ಚಾಗೋಸ್ ದ್ವೀಪಗಳನ್ನು ಬ್ರಿಟನ್ ಬೇರ್ಪಡಿಸಿತ್ತು.







