ಟ್ರಂಪ್ ಭಾಷಣ ತಿರುಚಿದ ವಿವಾದ: ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ರಾಜೀನಾಮೆ

ಟಿಮ್ ಡೇವಿ (Photo credit: AP)
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ಬಿತ್ತರಿಸಿದ ಆರೋಪ ಎದುರಿಸಿದ ಹಿನ್ನೆಲೆಯಲ್ಲಿ, ಬಿಬಿಸಿಯ ಮಹಾನಿರ್ದೇಶಕ ಟಿಮ್ ಡೇವಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.
ಬಿಬಿಸಿಯ ಸುದ್ದಿ ವಿಭಾಗದ ಮುಖ್ಯಸ್ಥೆ ಡೆಬೊರಾ ಟರ್ನೆಸ್ ಅವರೂ ಸಹ ತಮ್ಮ ಹುದ್ದೆ ತ್ಯಜಿಸಿದ್ದು, ಇಬ್ಬರ ರಾಜೀನಾಮೆಯೂ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ.
“ಈ ವಿವಾದವು ನಾವು ಪ್ರೀತಿಸುವ ಬಿಬಿಸಿಯ ಗೌರವಕ್ಕೆ ಧಕ್ಕೆಯಾಗಿದೆ. ಮುಖ್ಯಸ್ಥನಾಗಿ ನೈತಿಕ ಹೊಣೆ ಹೊತ್ತು ಸ್ಥಾನ ತ್ಯಜಿಸುತ್ತಿದ್ದೇನೆ,” ಎಂದು ಟಿಮ್ ಡೇವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2021ರ ಜನವರಿ 6ರಂದು ಅಮೆರಿಕ ಸಂಸತ್ ಭವನ ‘ಕ್ಯಾಪಿಟಲ್ ಹಿಲ್’ ಮೇಲೆ ನಡೆದ ದಾಳಿಗೂ ಮುನ್ನ ಟ್ರಂಪ್ ನೀಡಿದ ಭಾಷಣದ ಭಾಗವೊಂದನ್ನು ಬಿಬಿಸಿಯ ಪನೋರಮಾದ ಸಾಕ್ಷ್ಯಚಿತ್ರದಲ್ಲಿ ಬಳಸಲಾಗಿತ್ತು. ಆದರೆ ಅದನ್ನು “ತಪ್ಪಾಗಿ ನಿರೂಪಿಸಲಾಗಿದೆ” ಎಂಬ ಆರೋಪ ಹೊರಬಿದ್ದ ಬಳಿಕ ಬಿಬಿಸಿಯ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು.
ಈ ಕುರಿತು ಪ್ರತಿಕ್ರಿಯಿಸಿದ ಟ್ರಂಪ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, “ಬಿಬಿಸಿ ಈಗ ನಕಲಿ ಸುದ್ದಿಗಳ ತಾಣವಾಗಿ ಪರಿಣಮಿಸಿದೆ,” ಎಂದು ಉಲ್ಲೇಖಿಸಿದ್ದರು.
ನೂತನ ಮಹಾನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಟಿಮ್ ಡೇವಿ ತಾತ್ಕಾಲಿಕವಾಗಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.







