ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ಮನ್ ಅವರನ್ನು ವಜಾಗೊಳಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಜೇಮ್ಸ್ ಕ್ಲೆವರ್ಲೀ ನೂತನ ಗೃಹ ಕಾರ್ಯದರ್ಶಿ

Photo : Facebook
ಲಂಡನ್ : ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ಮನ್ ಅವರನ್ನು ವಜಾಗೊಳಿಸಿದ್ದು, ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲೀ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು indianexpress.com ವರದಿ ಮಾಡಿದೆ.
ಲಂಡನ್ ಪೋಲೀಸರು ಫೆಲಸ್ತೀನಿನ ಪರ ಪಕ್ಷಪಾತ ಹೊಂದಿದ್ದಾರೆಂದು ಆರೋಪಿಸಿ ಸುಯೆಲ್ಲಾ ಬ್ರಾವರ್ಮನ್ ಬರೆದ ಲೇಖನ ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಈ ಕ್ರಮ ಅನುಸರಿಸಲಾಗಿದೆ ಎನ್ನಲಾಗಿದೆ.
BBC ಯಲ್ಲಿನ ಲೇಖನವೊಂದರ ಪ್ರಕಾರ, ಬ್ರಾವರ್ಮನ್ ಗೆ ಸರ್ಕಾರದಲ್ಲಿ ಸಣ್ಣ ಹುದ್ದೆ ನೀಡುವ ಪ್ರಸ್ತಾಪವಿತ್ತು. ಆದರೆ ಅವರು ಅದನ್ನು ಸ್ವೀಕರಿಸಲು ಒಪ್ಪಲಿಲ್ಲ ಎನ್ನಲಾಗಿದೆ.
ಬ್ರಾವರ್ಮನ್ ಕ್ಯಾಬಿನೆಟ್ ಸ್ಥಾನವನ್ನು ಮಧ್ಯದಲ್ಲಿಯೇ ತೊರೆಯುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, 2022 ರಲ್ಲಿ ಲಿಜ್ ಟ್ರಸ್ ಸರ್ಕಾರದ ಅವಧಿಯಲ್ಲಿ, ಅವರು ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ ತಮ್ಮ ವೈಯಕ್ತಿಕ ಈ-ಮೇಲ್ನಿಂದ ಅಧಿಕೃತ ದಾಖಲೆಯನ್ನು ಕಳುಹಿಸುವ ಮೂಲಕ ಮಂತ್ರಿ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಹುದ್ದೆ ತೊರೆದರು. ಸುಮಾರು ಆರು ವಾರಗಳ ನಂತರ ರಿಷಿ ಸುನಕ್ ಅವರು ಹೊಸ ಕನ್ಸರ್ವೇಟಿವ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರನ್ನು ಮತ್ತೆ ಕರೆತರಲಾಯಿತು.
ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲಿ ದಾಳಿಯ ಬಗ್ಗೆ ಲಂಡನ್ನಲ್ಲಿ ನಡೆಯುತ್ತಿರುವ "ದ್ವೇಷ ಮೆರವಣಿಗೆ" ಯ ಬಗ್ಗೆ ಬ್ರಾವರ್ಮನ್ ಬರೆದ ಅಭಿಪ್ರಾಯದ ತುಣುಕನ್ನು ಅನುಸರಿಸಿ ಭಿನ್ನಾಭಿಪ್ರಾಯಗಳು ಮೂಡಿದವು. ಬ್ರಿಟಿಷ್ ದೈನಿಕ 'ದಿ ಟೈಮ್ಸ್ನಲ್ಲಿ' ಪ್ರಕಟವಾದ ಲೇಖನವೊಂದರಲ್ಲಿ, ಮೆಟ್ರೋಪಾಲಿಟನ್ ಅಧಿಕಾರಿಗಳು ಎಡಪಂಥೀಯ ಕಾರಣಗಳ ಬಗ್ಗೆ ಮೃದುವಾದ ನಿಲುವು ತೆಗೆದುಕೊಳ್ಳುತ್ತಿದ್ದಾರೆ ಎಂದು ಬ್ರಾವರ್ಮನ್ ಆರೋಪಿಸಿದ್ದಾರೆ.
"ಈ ಮೆರವಣಿಗೆಗಳು ಕೇವಲ ಗಾಝಾದ ಸಹಾಯಕ್ಕಾಗಿ ಕೂಗು ಎಂದು ನಾನು ನಂಬುವುದಿಲ್ಲ," ಎಂದು ಬ್ರಾವರ್ಮನ್ ಬರೆದಿದ್ದಾರೆ.







