ಅಪರೂಪದ ಮೆದುಳು ಕ್ಯಾನ್ಸರ್ ಗೆ ಬಲಿಯಾದ ಬ್ರಿಯಾನ್ ಬ್ರಾಮನ್

PC: x.com/nypost
ವಾಷಿಂಗ್ಟನ್: ಸೂಪರ್ ಬೌಲ್ ಎಲ್ಐಐ ಚಾಂಪಿಯನ್, ಈಗಲ್ಸ್ ತಂಡದ ಬ್ರಿಯಾನ್ ಬ್ರಾಮನ್ 38ನೇ ವಯಸ್ಸಿನಲ್ಲಿ ಅಪರೂಪದ ಮೆದುಳು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ತೀವ್ರತರ ಕ್ಯಾನ್ಸರ್ ಚಿಕಿತ್ಸೆಯ ವೇಳೆ ಕೂಡಾ ಬ್ರಾಮನ್ ಕೊನೆಯ ತಿಂಗಳುಗಳನ್ನು ಇಬ್ಬರು ಪುತ್ರಿಯರು ಹಾಗೂ ತಾಯಿ ಟೀನಾ ಜತೆ ಕಳೆದಿದ್ದರು. ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅತ್ಯಾಧುನಿಕ ಚಿಕಿತ್ಸೆಯ ಮೂಲಕ ಹಲವು ತಿಂಗಳುಗಳ ಜೀವನ್ಮರಣ ಹೋರಾಟ ನಡೆಸಿದ್ದರು.
2025ರ ಆರಂಭದಲ್ಲಿ ತೀವ್ರತರ ಮೆದುಳು ಕ್ಯಾನ್ಸರ್ ಪತ್ತೆಯಾದ ಬಳಿಕ ಬ್ರಿಯಾನ್ ಬ್ರಾಮನ್ ಹಲವು ಶಸ್ತ್ರಚಿಕಿತ್ಸೆಗಳು ಮತ್ತು ಸಿಎಆರ್-ಟಿ ಕೋಶ ಚಿಕಿತ್ಸೆಯನ್ನು ಸಿಯಾಟೆಲ್ ನಲ್ಲಿ ಪಡೆದಿದ್ದರು. ಎನ್ಎಫ್ಎಲ್ ಕಮ್ಯುನಿಟಿಯಿಂದ ಅತ್ಯಾಧುನಿಕ ಚಿಕಿತ್ಸೆಯನ್ನು ಪಡೆದರೂ, ರೋಗ ವೇಗವಾಗಿ ಹರಡುತ್ತಿತ್ತು. ಇವರ ಚಿಕಿತ್ಸೆಗಾಗಿ ಗೋಫಂಡ್ಮಿ 88 ಸಾವಿರ ಡಾಲರ್ ನೆರವು ಸಂಗ್ರಹಿಸಿತ್ತು. ಎನ್ಎಫ್ಎಲ್ ಆಟಗಾರರಾದ ಜೆ.ಜೆ.ವ್ಯಾಟ್ ನಂಥ ಹಲವು ಮಂದಿ ದೊಡ್ಡ ಮೊತ್ತದ ದೇಣಿಗೆ ನೀಡಿ ದೇಶಾದ್ಯಂತ ಇವರ ಜೀವನ್ಮರಣ ಹೋರಾಟ ಸುದ್ದಿಯಾಗಿತ್ತು.
ಚಿಕಿತ್ಸೆ ವೇಳೆ ಬ್ಲಾಕ್ಲಿ (11) ಮತ್ತು ಮಾರ್ಲೋವ್ (8) ಎಂಬ ಇಬ್ಬರು ಪುತ್ರಿಯರು ಇವರ ಜತೆಗೇ ಇದ್ದು, ತಾಯಿ ಟೀನಾ ಚಿಕಿತ್ಸೆಯನ್ನು ನಿಭಾಯಿಸುತ್ತಿದ್ದರು. ಪತ್ನಿಯ ಬಗ್ಗೆ ಎಲ್ಲೂ ಬಹಿರಂಗಪಡಿಸದಿದ್ದ ಬ್ರಾಮನ್ ಅವರನ್ನು ಹಲವು ಮಂದಿ "ಗರ್ಲ್ ಡ್ಯಾಡ್" ಎಂದೇ ಬಣ್ಣಿಸುತ್ತಿದ್ದರು.





