ಬ್ರಿಟನ್: ಪೀಡನೆಗೊಳಗಾದ ಭಾರತೀಯ ಮೂಲದ ಉದ್ಯೋಗಿಗೆ 24 ಕೋಟಿ ರೂ. ಪರಿಹಾರ ಘೋಷಣೆ

ಸಾಂದರ್ಭಿಕ ಚಿತ್ರ
ಲಂಡನ್: ಬ್ರಿಟನ್ನ ಬಹು ದೊಡ್ಡ ಪರಿಹಾರ ಮೊತ್ತವೆಂದೇ ಹೇಳಲಾಗಿರುವ ರಾಯಲ್ ಮೇಲ್ ಪರಿಹಾರ ಧನಕ್ಕೆ ಭಾರತೀಯ ಮೂಲದ ಉದ್ಯೋಗಿಯೊಬ್ಬರು ಪಾತ್ರರಾಗಿದ್ದು, ಉದ್ಯೋಗಿಯನ್ನು ಪೀಡನೆಗೊಳಪಡಿಸಿದ ಆರೋಪವನ್ನು ನ್ಯಾಯಾಲಯವು ಎತ್ತಿ ಹಿಡಿದಿದ್ದರಿಂದ ಅವರಿಗೆ 2.3 ದಶಲಕ್ಷ ಪೌಂಡ್ನಷ್ಟು (೨೪ ಕೋಟಿ ರೂ.) ಬೃಹತ್ ಮೊತ್ತದ ಪರಿಹಾರವನ್ನು ಘೋಷಿಸಲಾಗಿದೆ ಎಂದು timesofindia.com ವರದಿ ಮಾಡಿದೆ.
ಕಾಮ್ ಝೂಟಿ ಎಂಬ ಭಾರತೀಯ ಮೂಲದ ಉದ್ಯೋಗಿಯೊಬ್ಬರು ತನ್ನ ಸಹೋದ್ಯೋಗಿಯೊಬ್ಬ ಅನೈತಿಕವಾಗಿ ಬೋನಸ್ ಪಡೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕೆ ತಾನು ನನ್ನ ಕಂಪನಿಯ ಮುಖ್ಯಸ್ಥರಿಂದ ಪೀಡನೆ ಹಾಗೂ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಸುಮಾರು ಎಂದು ಎಂಟು ವರ್ಷಗಳ ಹಿಂದೆ ಉದ್ಯೋಗ ನ್ಯಾಯಾಧಿಕರಣದ ಮುಂದೆ ದೂರು ದಾಖಲಿಸಿದ್ದರು.
ಆಕೆಯ ಕಂಪನಿ ಮುಖ್ಯಸ್ಥರ ವರ್ತನೆಯಿಂದ ಆಕೆಯ ಮೇಲೆ ಅನರ್ಥಕಾರಿ ದುಷ್ಪರಿಣಾಮ ಉಂಟಾಗಿದೆ ಎಂಬ ಸಂಗತಿಯನ್ನು ನ್ಯಾಯಾಧಿಕರಣವು ವಿಚಾರಣೆಯ ಸಂದರ್ಭದಲ್ಲಿ ಪತ್ತೆ ಹಚ್ಚಿದೆ ಎಂದು 'The Daily Telegraph' ವರದಿ ಮಾಡಿದೆ.
"ದೂರುದಾರರಿಗೆ ಪ್ರತಿವಾದಿಯಿಂದ ಒಟ್ಟು 2,366,614.13 ಪೌಂಡ್ ಪರಿಹಾರ ಧನ ಸಲ್ಲಿಕೆಯಾಗಬೇಕು ಎಂದು ನ್ಯಾಯಾಧಿಕರಣ ತೀರ್ಪು ನೀಡಿದೆ". ದೀರ್ಘಕಾಲದಿಂದ ನಡೆಯುತ್ತಿದ್ದ ಈ ಪ್ರಕರಣಕ್ಕೆ ಈ ವಾರ ಸೇರ್ಪಡೆಯಾಗಿರುವ ಅಧಿಕೃತ ಪರಿಹಾರ ನಿರ್ಣಯದಲ್ಲಿ ಹೇಳಲಾಗಿದೆ.
"ಈ ಕೆಳಗಿನ ಕಂಡಿಕೆಗೆ ಒಳಪಟ್ಟಂತೆ, ನ್ಯಾಯಾಧಿಕರಣವು ಅಕ್ಟೋಬರ್ 3, 2022ರಂದು ಉಭಯ ವಾದಿಗಳಿಗೂ ರವಾನಿಸಿರುವ ಪರಿಹಾರ ಧನದ ಮೂಲ ತೀರ್ಪಿಗೆ ವಿರುದ್ಧವಾಗಿ ಪ್ರತಿವಾದಿಯು (ರಾಯಲ್ ಮೇಲ್) ಸಲ್ಲಿಸಿರುವ ಮೇಲ್ಮನವಿಯನ್ನು ಆಧರಿಸಿ ಪರಿಹಾರ ಧನ ವಿತರಣೆಗೆ ತಡೆ ನೀಡಲಾಗಿದೆ. ಈ ತಡೆಯನ್ನು ತೆರವುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲು ಉಭಯ ವಾದಿಗಳಿಗೂ ಸ್ವಾತಂತ್ರ್ಯವಿದೆ" ಎಂದು ನ್ಯಾಯಾಧಿಕರಣದ ಆದೇಶದಲ್ಲಿ ತಿಳಿಸಲಾಗಿದೆ.
"ಘೋಷಣೆಯಾಗಿರುವ ಒಟ್ಟು ಪರಿಹಾರ ಮೊತ್ತದ ಪೈಕಿ ಪ್ರತಿವಾದಿಯಾದ ರಾಯಲ್ ಮೇಲ್ ದೂರುದಾರರಿಗೆ 2,50,000 ಪೌಂಡ್ಗಳನ್ನು ನೀಡಲೇಬೇಕಿದೆ. ಈ ಮೊತ್ತಕ್ಕೆ ತಡೆಯಾಜ್ಞೆ ಅನ್ವಯಿಸುವುದಿಲ್ಲ" ಎಂದೂ ಆದೇಶದಲ್ಲಿ ಹೇಳಲಾಗಿದೆ.
"ಪ್ರತಿವಾದಿಯು ದೂರುದಾರರಿಗೆ ಈ ಮೊತ್ತವನ್ನು ಈ ವಿಚಾರಣೆಯ ದಿನದಿಂದ 14 ದಿನಗಳೊಳಗೆ ನೀಡಲಿದ್ದಾರೆ ಎಂದು ಉಭಯ ವಕೀಲರು ಒಪ್ಪಿಕೊಂಡಿದ್ದಾರೆ" ಎಂದೂ ತಿಳಿಸಲಾಗಿದೆ.