ಕರೋಲಿನಾ ವಿಮಾನ ನಿಲ್ದಾಣದಲ್ಲಿ ಲಘು ವಿಮಾನ ಅಪಘಾತ : 7 ಮಂದಿ ಮೃತ್ಯು

PC | X
ಕರೋಲಿನಾ: ಉತ್ತರ ಕರೋಲಿನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಪ್ರಯತ್ನದಲ್ಲಿದ್ದ ಖಾಸಗಿ ವಿಮಾನ ಗುರುವಾರ ರಾತ್ರಿ ಅಪಘಾತಕ್ಕೀಡಾಗಿ ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮಾಜಿ ಎನ್ಎಎಸ್ಸಿಎಆರ್ ಚಾಲಕ ಗ್ರೆಗ್ ಬಿಫೆಲ್ ಹಾಗೂ ಅವರ ಕುಟುಂಬ ಸದಸ್ಯರು ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಚಾರ್ಲೊಟ್ನಿಂದ 45 ಮೈಲಿ ದೂರದ ಸ್ಟೇಟಸ್ವಿಲ್ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಭೂಮಿಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡು ಭಸ್ಮಗೊಂಡಿತು ಎಂದು ಹೇಳಲಾಗಿದೆ. ಬಿಫಲ್ ಕಂಪನಿ ಈ ವಿಮಾನವನ್ನು ನಿರ್ವಹಿಸುತ್ತಿತ್ತು ಎಂದು ದಾಖಲೆಗಳಿಂದ ತಿಳಿದು ಬಂದಿದೆ.
"ವಿಮಾನ ಅಪಘಾತ ಸಂಭವಿಸಿದ್ದನ್ನು ನಾವು ದೃಢಪಡಿಸುತ್ತೇವೆ. ಬೆಳಿಗ್ಗೆ 10.15ರ ಸುಮಾರಿಗೆ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರಷನ್ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ" ಎಂದು ವಿಮಾನ ನಿಲ್ದಾಣದ ಫೇಸ್ಬುಕ್ ಪೇಜ್ನಲ್ಲಿ ವಿವರಿಸಲಾಗಿದೆ.
ಘಟನೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾದ ಬಳಿಕ ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಸ್ನಾ ಸಿ550 ಬ್ಯುಸಿನೆಸ್ ಜೆಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸಾವುಗಳು ಸಂಭವಿವೆ ಎಂದು ಇರೆಡೆಲ್ ಕೌಂಟಿ ಶ್ರಾಫ್ ಗ್ರಾಂಟ್ ಕ್ಯಾಂಪ್ಬೆಲ್ ಹೇಳಿದ್ದರೂ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿಲ್ಲ. ವಿಮಾನ ಸ್ಫೋಟದಿಂದ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅವಶೇಷಗಳತ್ತ ಪರಿಹಾರ ತಂಡ ಧಾವಿಸುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.







