ಕಣಿವೆ ಮೇಲೆ ಕೆಟ್ಟುನಿಂತ ಕೇಬಲ್‌ಕಾರು; ಆಗಸದಲ್ಲಿ ಸಿಲುಕಿಕೊಂಡ 8 ಮಂದಿಯ ರಕ್ಷಣೆಗೆ ಹರಸಾಹಸ
ಸಂತ್ರಸ್ತರಲ್ಲಿ 6 ಮಂದಿ ಮಕ್ಕಳು; ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾದ ಪ್ರತಿಕೂಲ ಹವಾಮಾನ

ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರಾಂತದ ಕಡಿದಾದ ಕಣಿವೆಯೊಂದರಲ್ಲಿ ಸಂಚರಿಸುತ್ತಿದ್ದ ಕೇಬಲ್ ಕಾರ್ ಕೆಟ್ಟುಹೋಗಿ, ಆರು ಮಂದಿ ಮಕ್ಕಳು ಸೇರಿದಂತೆ ಎಂಟು ಮಂದಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ದುರ್ಗಮವಾದ ಕಣಿವೆಯ ಆಚೆಗಿರುವ ತಮ್ಮ ಶಾಲೆಗೆ ಹೋಗಲು ಈ ಮಕ್ಕಳು ಕೇಬಲ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೇಬಲ್‌ಕಾರ್ 1200 ಅಡಿ ಎತ್ತರದಲ್ಲಿ ಚಲಿಸುತ್ತಿದ್ದಾಗ ಮಾರ್ಗಮಧ್ಯೆ ಕೆಟ್ಟುಹೋಯಿತು.
‘‘ಸುಮಾರು ಐದು ತಾಸುಗಳ ಕಾಲ ನಾವು ನೆಲದಿಂದ ಭಾರೀ ಎತ್ತರದಲ್ಲಿ ಸಿಲುಕಿಕೊಂಡಿದ್ದೇವೆ. ಕೇಬಲ್‌ನಲ್ಲಿದ್ವರಲ್ಲಿ ಓಬ್ಬಾತ ತೀವ್ರವಾಗಿ ನಿತ್ರಾಣಗೊಂಡಿದ್ದನು. ಸ್ಥಳಕ್ಕೆ ಒಂದು ಹೆಲಿಕಾಪ್ಟರ್ ಆಗಮಿಸಿತ್ತಾದರೂ, ಯಾವುದೇ ಕಾರ್ಯಾಚರಣೆ ನಡೆಸದೆ ನಿರ್ಗಮಿಸಿತು ಎಂದು ಕೇಬಲ್‌ಕಾರಿನ ಚಾಲಕ ಗುಲ್ಝಾರ್ ತಿಳಿಸಿದ್ದಾರೆ.
ಖೈಬರ್ ಪಖ್ತೂನ್‌ಖ್ವಾದ ಬಟ್ಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮಂಗಳವಾರ ಬೆಳಗ್ಗೆ ಸ್ಥಳೀಯ ಕಾಲಮಾನ 7:00 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ಮಸೀದಿಯಲ್ಲಿರುವ ಧ್ವನಿವರ್ದಕಗಳನ್ನು ಬಳಸಿಕೊಂಡು ಅಲಾಯ್ ಕಣಿವೆಯಾದ್ಯಂತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಪಾಕ್ ಪ್ರಧಾನಿ ಕರೆ ನೀಡಿದ್ದಾರೆ.
ಕೇಬಲ್‌ಕಾರ್‌ನಲ್ಲಿ ಸಿಲುಕಿದವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ರಕ್ಷಣಾ ಕಾರ್ಯಾಚರಣೆಗೆ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಿದೆಯೆಂದು ಮೂಲಗಳು ತಿಳಿಸಿವೆ.