"ನಮ್ಮ ಪ್ರದೇಶದೊಳಗೇ ಪ್ರತಿಮೆ ಇತ್ತು": ವಿಷ್ಣುವಿನ ಪ್ರತಿಮೆಯನ್ನು ಧ್ವಂಸಗೊಳಿಸಿದ ಥೈಲ್ಯಾಂಡ್ ವಿರುದ್ಧ ಕಾಂಬೋಡಿಯಾ ಆರೋಪ

Photo credit: X/@IndiaToday
ಫ್ನೋಮ್ ಪೆನ್: ವಿವಾದಿತ ಗಡಿ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ವಿಷ್ಣುವಿನ ಪ್ರತಿಮೆಯನ್ನು ಥೈಲ್ಯಾಂಡ್ ಧ್ವಂಸಗೊಳಿಸಿದೆ ಎಂದು ಕಾಂಬೋಡಿಯಾ ಬುಧವಾರ ಗಂಭೀರ ಆರೋಪ ಮಾಡಿದೆ. ಪ್ರತಿಮೆ ಕಾಂಬೋಡಿಯಾದ ವ್ಯಾಪ್ತಿಯೊಳಗೇ ಇತ್ತು ಎಂದು ಸರ್ಕಾರದ ವಕ್ತಾರ ಕಿಮ್ ಚಾನ್ಪನ್ಹಾ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಎರಡೂ ದೇಶಗಳ ನಡುವಿನ ಗಡಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಲೋಡರ್ ಬಳಸಿ ವಿಷ್ಣು ಪ್ರತಿಮೆಯನ್ನು ಕೆಡವುತ್ತಿರುವ ದೃಶ್ಯಗಳು ಕಾಣುತ್ತಿವೆ.
“ಬೌದ್ಧ ಹಾಗೂ ಹಿಂದೂ ಭಕ್ತರು ಪೂಜಿಸುವ ಪ್ರಾಚೀನ ದೇವಾಲಯಗಳು ಮತ್ತು ಪ್ರತಿಮೆಗಳ ನಾಶವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆನ್ ಸೆಸ್ ಪ್ರದೇಶದಲ್ಲಿದ್ದ ಈ ಪ್ರತಿಮೆ ನಮ್ಮ ಪ್ರದೇಶದೊಳಗೇ ಇತ್ತು,” ಎಂದು ಕಿಮ್ ಚಾನ್ಪನ್ಹಾ ಹೇಳಿದ್ದಾರೆ. 2014ರಲ್ಲಿ ನಿರ್ಮಿಸಲಾದ ಈ ಪ್ರತಿಮೆಯನ್ನು ಥೈಲ್ಯಾಂಡ್ ಗಡಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಸೋಮವಾರ ಧ್ವಂಸಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಬೋಡಿಯಾ–ಥೈಲ್ಯಾಂಡ್ ನಡುವಿನ ದೀರ್ಘಕಾಲದ ಗಡಿ ವಿವಾದ ಈ ತಿಂಗಳು ಮತ್ತಷ್ಟು ತೀವ್ರಗೊಂಡಿದ್ದು, ಅಧಿಕೃತ ಅಂಕಿಅಂಶಗಳ ಪ್ರಕಾರ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸುತ್ತಮುತ್ತ ಒಂದು ಮಿಲಿಯನ್ ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಘರ್ಷಣೆಗೆ ತೆರೆ ಎಳೆಯುವ ಉದ್ದೇಶದಿಂದ ತಟಸ್ಥ ದೇಶದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವಂತೆ ಕಾಂಬೋಡಿಯಾ ಮನವಿ ಮಾಡಿದ್ದರೂ, ಅದನ್ನು ಥೈಲ್ಯಾಂಡ್ ಮಂಗಳವಾರ ತಿರಸ್ಕರಿಸಿದೆ. ಚಂತಬುರಿ ಪ್ರಾಂತ್ಯದಲ್ಲಿ ನಾಲ್ಕು ದಿನಗಳ ಸಭೆ ಬುಧವಾರ ಆರಂಭವಾಗಲಿದೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಾಂಬೋಡಿಯಾ ಸಭೆಗೆ ಹಾಜರಾಗುವ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ.
ಇತ್ತೀಚಿನ ಉದ್ವಿಗ್ನತೆಗೆ ಕಾರಣ ಯಾರು ಎಂಬುದರ ಬಗ್ಗೆ ಎರಡೂ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತಿದ್ದು, ನಾಗರಿಕರ ಮೇಲೆ ದಾಳಿ ನಡೆಸಿದ ಆರೋಪಗಳನ್ನೂ ವಿನಿಮಯ ಮಾಡಿಕೊಂಡಿವೆ. ಗಡಿಯಲ್ಲಿರುವ ದೇವಾಲಯದ ಅವಶೇಷಗಳಿಗೆ ಥಾಯ್ ಪಡೆಗಳು ಹಾನಿ ಮಾಡಿವೆ ಎಂದು ಕಾಂಬೋಡಿಯಾ ಹೇಳುತ್ತಿದ್ದರೆ, ಶತಮಾನಗಳಷ್ಟು ಹಳೆಯ ಕಲ್ಲಿನ ರಚನೆಗಳಲ್ಲಿ ಕಾಂಬೋಡಿಯಾ ಸೈನಿಕರನ್ನು ನಿಯೋಜಿಸಿದೆ ಎಂದು ಥೈಲ್ಯಾಂಡ್ ಪ್ರತಿಕ್ರಿಯಿಸಿದೆ.
ವಸಾಹತುಶಾಹಿ ಯುಗದಲ್ಲಿ ಗುರುತಿಸಲಾದ ಸುಮಾರು 800 ಕಿಲೋಮೀಟರ್ ಉದ್ದದ ಗಡಿ ಹಂಚಿಕೆಗೆ ಸಂಬಂಧಿಸಿದ ಪ್ರಾದೇಶಿಕ ವಿವಾದವೇ ಈ ಸಂಘರ್ಷದ ಮೂಲ ಎನ್ನಲಾಗಿದೆ.







