ಕಾಂಬೋಡಿಯಾ – ಥೈಲ್ಯಾಂಡ್ ಶಾಂತಿ ಒಪ್ಪಂದ ಅಮಾನತು

Photo: washingtonpost
ಬ್ಯಾಂಕಾಕ್, ನ.11: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕಳೆದ ತಿಂಗಳು ಸಹಿ ಹಾಕಲಾಗಿದ್ದ ಕಾಂಬೋಡಿಯಾ-ಥೈಲ್ಯಾಂಡ್ ಶಾಂತಿ ಒಪ್ಪಂದವನ್ನು ಥೈಲ್ಯಾಂಡ್ ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.
ಕಾಂಬೋಡಿಯಾದೊಂದಿಗಿನ ಗಡಿ ಭಾಗದಲ್ಲಿ ನೆಲದಡಿ ಹೂತಿದ್ದ ಸ್ಫೋಟಕ ಸಿಡಿದು ಥೈಲ್ಯಾಂಡ್ ನ ಯೋಧರು ಗಾಯಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಥೈಲ್ಯಾಂಡ್ ನ ರಕ್ಷಣಾ ಸಚಿವ ನಟ್ಟಫೊವಾನ್ ನರ್ಕ್ಫನಿಟ್ ಹೇಳಿದ್ದಾರೆ.
ಘಟನೆಯ ಬಳಿಕ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಒಪ್ಪಂದವನ್ನು ಅಮಾನತಿನಲ್ಲಿರಿಸುವ ಮತ್ತು ಒಪ್ಪಂದದ ಪ್ರಕಾರ ಕಾಂಬೋಡಿಯಾದ ಬಂಧಿತರನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಸರ್ಕಾರದ ವಕ್ತಾರ ಸಿರಿಪೊಂಗ್ ಅಂಕಾಸಕುಲ್ಕಿಯಾಟ್ ಹೇಳಿದ್ದಾರೆ.
ಈ ಮಧ್ಯೆ, ಥೈಲ್ಯಾಂಡ್ ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಗಡಿಯನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಲು ಪ್ರಧಾನಿ ಅನುಟಿನ್ ಚರ್ನ್ವಿರಾಕುಲ್ ರಕ್ಷಣಾ ಇಲಾಖೆಗೆ ಸೂಚಿಸಿದ್ದಾರೆ. ಒಂದು ವೇಳೆ ಥೈಲ್ಯಾಂಡ್ ಸಲ್ಲಿಸಿದ ಔಪಚಾರಿಕ ಪ್ರತಿಭಟನೆಗೆ ಕಾಂಬೋಡಿಯಾ ಪ್ರತಿಕ್ರಿಯಿಸದಿದ್ದರೆ ಶಾಂತಿ ಒಪ್ಪಂದದ ಸಂಪೂರ್ಣ ರದ್ದತಿಯನ್ನು ಸರಕಾರ ಪರಿಗಣಿಸಬಹುದು ಎಂದು ಸರಕಾರ ಹೇಳಿದೆ.





