ಭಾರತ-ಪಾಕ್ ಶಾಂತಿ ಸ್ಥಾಪನೆಗೆ ಟ್ರಂಪ್ ಕಾರಣ ಎಂದ ಕೆನಡಾ ಪ್ರಧಾನಿ

ಮಾರ್ಕ್ ಕಾರ್ನಿ , ಡೊನಾಲ್ಡ್ ಟ್ರಂಪ್ | Photo Credit : NDTV
ವಾಶಿಂಗ್ಟನ್,ಅ.8: ಡೊನಾಲ್ಡ್ ಟ್ರಂಪ್ ಓರ್ವ ಪರಿವರ್ತನಾತ್ಮಕ ಅಧ್ಯಕ್ಷ ಕೆನಡದ ಪ್ರಧಾನಿ ಮಾರ್ಕ್ ಕಾರ್ನಿ ಬಣ್ಣಿಸಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವೆ ‘ಶಾಂತಿ’ಯನ್ನು ಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕೆಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಮಾರ್ಕ್ಕಾರ್ನಿ ಅವರು, ಜಾಗತಿಕ ವ್ಯವಹಾರಗಳು ಹಾಗೂ ಆರ್ಥಿಕ ಸ್ಥಿರತೆಯ ಮೇಲೆ ಅಮೆರಿಕ ಅಧ್ಯಕ್ಷರು ಪ್ರಭಾವಬೀರಿದ್ದಾರೆಂದು ಟ್ರಂಪ್ ಅವರನ್ನು ಶ್ಲಾಘಿಸಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಟ್ರಂಪ್ ಜೊತೆ ಮಾತುಕತೆ ನಡೆಸಿದ ಕಾರ್ನಿ ಅವರು, ‘‘ಕೆಲವು ತಿಂಗಳುಗಳ ಹಿಂದೆ ನನಗೆ ಹಾಗೂ ನನ್ನ ಸಹದ್ಯೋಗಿಗಳಿಗೆ ನೀವು (ಟ್ರಂಪ್) ಆತಿಥ್ಯ ನೀಡಿದ ಸಂದರ್ಭ, ನೀವು ಓರ್ವ ಪರಿವರ್ತನಾಶೀಲ ಅಧ್ಯಕ್ಷರೆಂದು ನಾನು ಹೇಳಿದ್ದೆ. ಆವಾಗಿನಿಂದ ಆರ್ಥಿಕತೆಯಲ್ಲಿ ಪರಿವರ್ತನೆಗಳಾಗಿವೆ, ನೇಟೊದ ಪಾಲುದಾರರ ನಡುವೆ ರಕ್ಷಣಾ ವ್ಯಯದ ಕುರಿತು ಅಭೂತಪೂರ್ವ ಬದ್ಧತೆಗಳು ಏರ್ಪಟ್ಟಿವೆ. ಭಾರತ-ಪಾಕಿಸ್ತಾನ ನಡುವೆ ಹಾಗೂ ಅಝರ್ಬೈಝಾನ್-ಆರ್ಮೆನಿಯ ನಡುವೆ ಶಾಂತಿ ಸ್ಥಾಪನೆ, ಇರಾನ್ ನ ಭಯೋತ್ಪಾದನಾ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಲಾಗಿದೆ. ಇವೆಲ್ಲವೂ ಅತ್ಯಂತ ಮುಖ್ಯವಾಗಿವೆ’’ ಎಂದವರು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ಆನಂತರ ಭಾರತ ಹಾಗೂ ಪಾಕ್ ನಡುವೆ ಭುಗಿಲೆದ್ದ ಸಂಘರ್ಷವನ್ನು ನಿಲ್ಲಿಸಿ, ಕದನವಿರಾಮವನ್ನು ತಾನು ಏರ್ಪಡಿಸಿದ್ದಾಗಿ ಡೊನಾಲ್ಡ್ ಟ್ರಂಪ್ ಹಲವಾರು ಸಲ ಪುನರುಚ್ಚರಿಸುತ್ತಾ ಬಂದಿದ್ದಾರೆ. ಆದರೆ ಭಾರತ ಸರಕಾರ ಅವರ ವಾದವನ್ನು ತಳ್ಳಿಹಾಕುತ್ತಾ ಬಂದಿದೆ.





