ಕೆನಡಾ ಗುರುದ್ವಾರದಲ್ಲಿ ಚಾಕು ಇರಿತ: ಇಬ್ಬರಿಗೆ ಗಾಯ; ಜೈಲಿನಿಂದ ಬಿಡುಗಡೆಯಾದ ಮರುದಿನವೇ ಆರೋಪಿ ವಶಕ್ಕೆ

Photo: x.com/sdineshaa
ಒಟ್ಟಾವಾ: ಕೆನಡಾದ ಎಡ್ಮಂಟನ್ನಲ್ಲಿರುವ ಗುರುದ್ವಾರವೊಂದರಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಚಾಕು ಇರಿತದ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ಕೇವಲ ಒಂದು ದಿನದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು 2015ರಿಂದಲೂ ಹಲವು ಹಿಂಸಾತ್ಮಕ ದಾಳಿಗಳ ಇತಿಹಾಸ ಹೊಂದಿದ್ದಾನೆ. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಈತನು ಗುರುವಾರವಷ್ಟೇ ಆಲ್ಬರ್ಟಾದ ಫೆಡರಲ್ ಜೈಲಿನಿಂದ ಬಿಡುಗಡೆಯಾಗಿದ್ದ. ಎಡ್ಮಂಟನ್ನ ಪುನರ್ವಸತಿ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕಿದ್ದ ಈತನು ಅಲ್ಲಿಗೆ ಹಾಜರಾಗಿರಲಿಲ್ಲ.
ಸ್ಥಳೀಯ ಕಾಲಮಾನ ಮುಂಜಾನೆ 4:49ಕ್ಕೆ ವ್ಯಕ್ತಿಯೊಬ್ಬರು ಹೆದ್ದಾರಿಯಲ್ಲಿ ವಾಹನಗಳ ನಡುವೆ ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಅದಾಗಿ 15 ನಿಮಿಷಗಳ ಬಳಿಕ ಗುರುದ್ವಾರದ ಒಳಗೆ ಚಾಕು ಇರಿತ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಎಡ್ಮಂಟನ್ ಪೊಲೀಸ್ ಸೇವೆಯ ತನಿಖಾಧಿಕಾರಿ ಎರಿಕ್ ಸ್ಟೀವರ್ಟ್ ತಿಳಿಸಿದ್ದಾರೆ.
ಆರೋಪಿಯು ಗುರುದ್ವಾರವನ್ನು ಪ್ರವೇಶಿಸಿ ಪ್ರಾರ್ಥನಾ ಸ್ಥಳಕ್ಕೆ ತೆರಳಲು ಯತ್ನಿಸಿದಾಗ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಗಲಾಟೆ ತೀವ್ರಗೊಂಡಿದ್ದು, ಗುರುದ್ವಾರದಲ್ಲಿದ್ದ ಇಬ್ಬರು ಭಕ್ತರಿಗೆ ಚಾಕುವಿನಿಂದ ಇರಿಯಲಾಗಿದೆ. ಸಮಯಪ್ರಜ್ಞೆಯಿಂದ ತಕ್ಷಣ ಕಾರ್ಯಪ್ರವೃತ್ತರಾದ ಪ್ರತ್ಯಕ್ಷದರ್ಶಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಗೊಂಡ 75 ಮತ್ತು 51 ವರ್ಷದ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಗಾಯಗಳು ಗಂಭೀರವಾಗಿಲ್ಲ. ಇಬ್ಬರ ಸ್ಥಿತಿಯೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ತನಿಖೆ ಮುಂದುವರಿಯಲಿದೆ. ಇದು ದ್ವೇಷಪೂರಿತ ಉದ್ದೇಶದಿಂದ ಪ್ರೇರಿತವಾದ ದಾಳಿಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕೆನಡಾದ ವಿಶ್ವ ಸಿಖ್ ಸಂಸ್ಥೆಯು ಈ ದಾಳಿಯನ್ನು ಕಟುವಾಗಿ ಖಂಡಿಸಿದ್ದು, ದೇಶದಲ್ಲಿ ಸಿಖ್ ವಿರೋಧಿ ದ್ವೇಷ ಹೆಚ್ಚುತ್ತಿರುವ ನಡುವೆಯೇ ಈ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿ ಎಂದು ಹೇಳಿದೆ. ಅಲ್ಲದೆ, ದಾಳಿಯ ಸಂದರ್ಭದಲ್ಲಿ ಗುರುದ್ವಾರದಲ್ಲಿದ್ದ ಸಿಖ್ ಧರ್ಮಗ್ರಂಥದ ಪ್ರತಿಯೊಂದಕ್ಕೆ ಅಪಚಾರ ಎಸಗಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ದಾಳಿಯನ್ನು ಖಂಡಿಸಿದ್ದು, ಸಂತ್ರಸ್ತರು ಹಾಗೂ ಸಿಖ್ ಸಮುದಾಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.






