ಕೆನಡಾ: ಖಾಲಿಸ್ತಾನಿ ಬೆಂಬಲಿಗರಿಂದ ಹಿಂದೂ ದೇವಸ್ಥಾನದಲ್ಲಿ ದಾಂಧಲೆ

Photo: Twitter@Sameer Koushal
ಹೊಸದಿಲ್ಲಿ: ಖಾಲಿಸ್ತಾನಿ ಬೆಂಬಲಿಗರು ಕೆನಡಾದಲ್ಲಿ ಶನಿವಾರ ರಾತ್ರಿ ದೇವಸ್ಥಾನದಲ್ಲಿ ದಾಂಧಲೆ ನಡೆಸಿದ್ದು ಈ ಕೃತ್ಯವು ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರಿಟಿಷ್ ಕೊಲಂಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಗೋಡೆಗಳು ಮತ್ತು ದ್ವಾರದ ಮೇಲೆ "ಖಾಲಿಸ್ತಾನ್ ಪರ" ಪೋಸ್ಟರ್ ಗಳನ್ನು ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 18 ರಂದು ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾ ತನಿಖೆ ಮಾಡಬೇಕೆಂದು ಪೋಸ್ಟರ್ ಗಳಲ್ಲಿ ಒತ್ತಾಯಿಸಲಾಗಿದೆ.
ಇಬ್ಬರು ಮುಸುಕುಧಾರಿ ವ್ಯಕ್ತಿಗಳು ದೇವಾಲಯದ ಗೋಡೆಗಳು ಹಾಗೂ ಗೇಟ್ ಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸುತ್ತಿರುವುದನ್ನು ಭದ್ರತಾ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ವೀಡಿಯೊ ತೋರಿಸುತ್ತದೆ.
ಖಾಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಕೆನಡಾದ ಆರ್ಮ್ ಮುಖ್ಯಸ್ಥರಾಗಿದ್ದ ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಈ ವರ್ಷದ ಜೂನ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ದೇಶದಲ್ಲಿ ಈ ವರ್ಷ ನಡೆದ ನಾಲ್ಕನೇ ದೇವಸ್ಥಾನ ದಾಂಧಲೆ ಘಟನೆ ಇದಾಗಿದೆ. ಈ ವರ್ಷದ ಎಪ್ರಿಲ್ನಲ್ಲಿ ಒಂಟಾರಿಯೊದಲ್ಲಿ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ದಾಂಧಲೆ ನಡೆಸಲಾಗಿತ್ತು. ಫೆಬ್ರವರಿಯಲ್ಲಿ, ಕೆನಡಾದ ಮಿಸ್ಸಿಸೌಗಾದ ರಾಮಮಂದಿರದ ಮೇಲೆ ದಾಳಿ ನಡೆಸಲಾಯಿತು ಹಾಗೂ ಜನವರಿಯಲ್ಲಿ ಬ್ರಾಂಪ್ಟನ್ ನಲ್ಲಿರುವ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದಿಂದ ವಿರೂಪಗೊಳಿಸಲಾಯಿತು.
A Hateful Act: #Khalistanreferendum posters were purposely pasted at the main door of the Hindu Mandir @surreymandir in #Surrey #Canada at midnight to create an atmosphere of fear among Hindus.@surreyps @SurreyRCMP #HindusUnderAttack @mikefarnworthbc @sukhdhaliwal @Dave_Eby pic.twitter.com/oew8IdPDWm
— Sameer Kaushal ❤ (@itssamonline) August 12, 2023