Canada | ಟೊರೊಂಟೊದಲ್ಲಿ ಸಾಮೂಹಿಕ ಗುಂಡಿನ ದಾಳಿ: ಇಬ್ಬರ ಸಾವು, ಮೂವರಿಗೆ ಗಾಯ

Photo: x.com/JCEPhoto
ಟೊರೊಂಟೊ, ಜು. 12: ಕೆನಡಾದ ಟೊರೊಂಟೊ ನಗರದಲ್ಲಿ ಶನಿವಾರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಪರಾರಿಯಾಗಿರುವ ಶೂಟರ್ಗಾಗಿ ಟೊರೊಂಟೊ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅಂಗಡಿಗಳು ಮತ್ತು ಉಪಾಹಾರಗೃಹಗಳು ಹೆಚ್ಚಿರುವ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಆ ಪ್ರದೇಶಕ್ಕೆ ತೆರಳದಂತೆ ಟೊರೊಂಟೊ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
‘ದಯವಿಟ್ಟು ಘಟನಾ ಪ್ರದೇಶವನ್ನು ತಕ್ಷಣ ತಪ್ಪಿಸಿ. ಪೊಲೀಸರ ಎಲ್ಲ ನಿರ್ದೇಶನಗಳನ್ನು ಪಾಲಿಸಿ’ ಎಂದು ಟೊರೊಂಟೊ ಪೊಲೀಸರು ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
ಬಳಿಕ ಮತ್ತೊಂದು ಪ್ರಕಟಣೆ ಹೊರಡಿಸಿರುವ ಪೊಲೀಸರು, ‘ಘಟನಾ ಸ್ಥಳವನ್ನು ಸುರಕ್ಷಿತಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಪತ್ತೆಗೆ ತನಿಖೆ ಮತ್ತು ಶೋಧ ಕಾರ್ಯ ಮುಂದುವರಿದಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಸಾಲ್ಸಾ ಉತ್ಸವ ನಡೆಯುತ್ತಿದ್ದ ಪ್ರದೇಶದಲ್ಲೇ ಗುಂಡಿನ ದಾಳಿ ನಡೆದಿದೆ. ಘಟನೆಯಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನರು ಆತಂಕಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದರು.
ಕಳೆದ ತಿಂಗಳ ಅಂತ್ಯದಲ್ಲಿ ಮಾಂಟ್ರಿಯಲ್ನಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿಯ ಬಳಿಕ ಈ ಘಟನೆ ಸಂಭವಿಸಿದೆ. ಆ ವೇಳೆ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಕಾನೂನು ಜಾರಿ ಸಿಬ್ಬಂದಿ ಗುಂಡೇಟಿಗೆ ಬಲಿಯಾಗಿದ್ದರು.
ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಕೆನಡಾದ ಪಶ್ಚಿಮ ಭಾಗದ ಸಣ್ಣ ಗಣಿಗಾರಿಕೆ ಪಟ್ಟಣವಾದ ಟಂಬ್ಲರ್ ರಿಡ್ಜ್ನ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶೂಟರ್ನ ತಾಯಿ ಮತ್ತು ಮಲಸಹೋದರ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 27 ಮಂದಿ ಗಾಯಗೊಂಡಿದ್ದು, ಬಳಿಕ ಶೂಟರ್ ಆತ್ಮಹತ್ಯೆ ಮಾಡಿಕೊಂಡಿದ್ದಳು.






