Canada ಪೊಲೀಸರಿಗೆ ಬಿಷ್ಣೋಯಿ ಗ್ಯಾಂಗ್ ನಿಂದ ಬೆದರಿಕೆ!

Photo Credit : PTI
ಒಟ್ಟಾವ, ಮೇ 29: ಭಾರತದಲ್ಲಿ ಬಂಧನದಲ್ಲಿರುವ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಕಳೆದ ವರ್ಷ ಕೆನಡದ ಪೊಲೀಸರಿಗೆ ಪತ್ರವೊಂದನ್ನು ಬರೆದು, ಕೆನಡದಲ್ಲಿರುವ ದಕ್ಷಿಣ ಏಷ್ಯಾ ಮೂಲದ ಗಣ್ಯರು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಿ ಹಣಸುಲಿಗೆ ಮಾಡುವ ತನ್ನ ಕಾರ್ಯಾಚರಣೆಯ ಭಾಗವಾಗಿ ಗುಂಡಿನ ದಾಳಿಗಳನ್ನು ನಡೆಸಲು ತನ್ನ ತಂಡದ 1,000ಕ್ಕೂ ಅಧಿಕ ಮಂದಿ ಸಿದ್ಧರಾಗಿದ್ದಾರೆಂದು ತಿಳಿಸಿತ್ತೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಈ ಪತ್ರವು 2025ರ ಆಗಸ್ಟ್ ನಲ್ಲಿ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಅಬ್ಬೊಟ್ಸ್ಫೋರ್ಡ್ ಪೊಲೀಸ್ ಠಾಣೆಗೆ ಬಂದಿತ್ತು ಎಂದು ವರದಿ ತಿಳಿಸಿದೆ.
ಎಡ್ಮಂಟನ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಕೆವಿನ್ ಸೈಂಟ್ ಲೂಯಿಸ್ ಅವರು ವಲಸೆ ಮತ್ತು ನಿರಾಶ್ರಿತ ಮಂಡಳಿಯ ಮುಂದೆ ಸಾಕ್ಷ್ಯ ನೀಡಿದ ವೇಳೆ ಪತ್ರದ ಕುರಿತ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ದಕ್ಷಿಣ ಏಷ್ಯನ್ನರಿಗೆ ಸೇರಿದ ಪ್ರತಿಯೊಂದು ಉದ್ಯಮ ಸಂಸ್ಥೆಯಿಂದಲೂ ಹಫ್ತಾ ವಸೂಲಿ ಮಾಡುವ ಬಗ್ಗೆಯೂ ಗ್ಯಾಂಗ್ ಪತ್ರದಲ್ಲಿ ವಿವರಿಸಿತ್ತು ಎಂದು ಅವರು ಹೇಳಿದ್ದಾರೆ.
ಈ ಪತ್ರದ ವಿವರಗಳನ್ನು ಕೆನಡಾದ್ಯಂತ ಸುಲಿಗೆ ದಂಧೆಯ ವಿರುದ್ಧ ಹೋರಾಟ ನಡೆಸುತ್ತಿರುವ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಬಿಷ್ಣೋಯಿ ಸುಮಾರು ಒಂದು ದಶಕದಿಂದ ಭಾರತದ ಕಾರಾಗೃಹದಲ್ಲಿದ್ದು, ಕೆನಡದ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲೊಬ್ಬನಾಗಿದ್ದಾನೆ. ಆತ ಜೈಲಿನಲ್ಲಿದ್ದೇ ತನ್ನ ಅಂತಾರಾಷ್ಟ್ರೀಯ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದಾನೆ ಎಂದು ನಂಬಲಾಗಿದೆ.






