ಭಾರತೀಯರ ತಾತ್ಕಾಲಿಕ ವೀಸಾಗಳ ಸಾಮೂಹಿಕ ರದ್ದತಿ ಕುರಿತು ಕೆನಡಾ ಪರಿಶೀಲನೆ

Photo: economictimes
ಟೊರೊಂಟೊ,ನ.5: ಪ್ರಸಕ್ತ ನೆನೆಗುದಿಯಲ್ಲಿರುವ ಮಸೂದೆಯ ಮೂಲಕ ಭಾರತದಿಂದ ಸಲ್ಲಿಕೆಯಾಗುವ ತಾತ್ಕಾಲಿಕ ವೀಸಾ ಅರ್ಜಿಗಳನ್ನು ಸಾಮೂಹಿಕವಾಗಿ ರದ್ದುಪಡಿಸುವ ಅಧಿಕಾರವನ್ನು ಹೊಂದಲು ಕೆನಡಾ ಸರಕಾರ ಬಯಸಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ವೀಸಾ ಅರ್ಜಿ ಸಲ್ಲಿಕೆಯಲ್ಲಿ ವಂಚನೆಗಳು ನಡೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ಕೆನಡಾ ಸರಕಾರ ಹೆಜ್ಜೆಯಿಟ್ಟಿದೆ ಎಂದು ವರದಿ ಹೇಳಿದೆ.
ಕೆನಡಾದ ವಲಸೆ, ನಿರಾಶ್ರಿತರು ಹಾಗೂ ಪೌರತ್ವ (ಐಆರ್ಸಿಸಿ), ಕೆನಡಿಯನ್ ಗಡಿ ಸೇವೆಗಳ ಏಜೆನ್ಸಿ (ಸಿಬಿಎಸ್ಎ) ಹಾಗೂ ಅಮೆರಿಕದ ಕೆಲವು ಇಲಾಖೆಗಳ ಹೇಳಿಕೆಗಳನ್ನು ಉಲ್ಲೇಖಿಸಿ ಸಿಬಿಸಿ ನ್ಯೂಸ್ ಮಾಧ್ಯಮ ಸಂಸ್ಥೆಯು ಈ ವರದಿಯನ್ನು ಪ್ರಕಟಿಸಿದೆ.
ಭಾರತದಿಂದ ಸಲ್ಲಿಸಲಾಗುವ ತಾತ್ಕಾಲಿಕ ವೀಸಾ ಅರ್ಜಿ ವ್ಯವಸ್ಥೆಯಲ್ಲಿರುವ ವಂಚನೆಗಳನ್ನು ಹಿಮ್ಮೆಟ್ಟಿಸಲು ಮಸೂದೆಯೊಂದರಲ್ಲಿರುವ ಪ್ರಸ್ತಾವಿತ ಸಾಮೂಹಿಕ ವೀಸಾ ರದ್ದತಿ ಕಾನೂನನ್ನು ಬಳಸಲು ಕೆನಡಾ ಸರಕಾರ ಬಯಸಿದೆ.
ವೀಸಾ ವಂಚನೆಯ ಸವಾಲುಗಳಿರುವ ದೇಶಗಳೆಂದು ಭಾರತ ಹಾಗೂ ಬಾಂಗ್ಲಾಗಳನ್ನು ಮಾತ್ರವೇ ಹೇಳಿಕೆಯಲ್ಲಿ ನಿರ್ದಿಷ್ಟವಾಗಿ ಹೆಸರಿಸಲಾಗಿದೆ ಎಂದು ವರದಿ ಹೇಳಿದೆ.
ಸಾಂಕ್ರಾಮಿಕ ರೋಗ ಅಥವಾ ಯುದ್ಧದ ಸಂದರ್ಭದಲ್ಲಿ ವೀಸಾಗಳನ್ನು ಸಾಮೂಹಿಕವಾಗಿ ರದ್ದುಪಡಿಸಬಹುದೆಂದು ಮಸೂದೆಯು ಪ್ರಸ್ತಾವಿಸಿದೆ. ಆದರೆ ವರದಿಯ ಪ್ರಕಾರ, ಭಾರತ, ಬಾಂಗ್ಲಾದಂತಹ ನಿರ್ದಿಷ್ಟ ದೇಶಗಳ ಕೆನಡಿಯನ್ ವೀಸಾ ಹೊಂದಿರುವವರನ್ನು ಗುರಿಯಿರಿಸಲು ಕೆನಡಿಯನ್ ಅಧಿಕಾರಿಗಳು ಆಸಕ್ತಿ ಹೊಂದಿದ್ದಾರೆನ್ನಲಾಗಿದೆ.
ಕಾರ್ಮಿಕರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಸಂದರ್ಶಕರನ್ನು ತಾತ್ಕಾಲಿಕ ನಿವಾಸಿಗಳೆಂದು ಪರಿಗಣಿಸಲಾಗುತ್ತದೆ. ಕೆನಡದ ಗಡಿಗಳನ್ನು ಬಲಪಡಿಸುವ ಉದ್ದೇಶದ ಭಾಗವಾಗಿ ಈ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ವಲಸೆ ವ್ಯಾಜ್ಯಗಳ ಕುರಿತಾದ ನ್ಯಾಯವಾದಿ ಸುಮಿತ್ ಸೇನ್ ಅವರು ಹಿಂದೂಸ್ತಾನ್ ಟೈಮ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಒಂದು ವೇಳೆ ಕೆನಡಾದ ಲಿಬರಲ್ ಸರಕಾರವು ಬಲಿಷ್ಠ ಗಡಿಗಳ ಮಸೂದೆಯನ್ನು ಅಂಗೀಕರಿಸಿದಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ವ್ಯಾಪಕ ಅಧಿಕಾರ ದೊರೆಯಲಿದ್ದು, ಕೆನಡಾವು ಭಾರತೀಯ ವೀಸಾ ಅರ್ಜಿಗಳನ್ನು ಸಾಮೂಹಿಕವಾಗಿ ರದ್ದುಪಡಿಸಬಹುದೆಂಬ ಭೀತಿ ಮೂಡಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ವಲಸಿಗರ ಪ್ರಮಾಣವನ್ನು ಕಡಿಮೆಗೊಳಿಸಲು ಕೆನಡಾ ಸರಕಾರವು ಪರಿಶೀಲಿಸುತ್ತಿರುವ ನಡುವೆಯೇ ಈ ಪ್ರಸ್ತಾವಿತ ಕ್ರಮಗಳ ಬಗ್ಗೆ ಘೋಷಣೆ ಹೊರಬಿದ್ದಿದೆ.







