Canada | 16 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಸಾಂದರ್ಭಿಕ ಚಿತ್ರ | Photo Credit : Gemini.AI
ಒಟ್ಟಾವ,ಜೂ.11: ಹದಿನಾರು ವರ್ಷಕ್ಕಿಂತ ಕಿರಿಯವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ನಿಷೇಧಿಸುವ ಮಸೂದೆಯನ್ನು ಕೆನಡಾ ಬುಧವಾರ ಮಂಡಿಸಿದೆ. ಆದರೆ ಮಕ್ಕಳ ರಕ್ಷಣೆಗಾಗಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಾಮಾಜಿಕ ಜಾಲತಾಣಗಳಿಗೆ ಈ ನಿಷೇಧದಿಂದ ವಿನಾಯಿತಿ ನೀಡಲಾಗುವುದು ಎಂದು ಮಸೂದೆ ತಿಳಿಸಿದೆ.
ನೂತನ ಮಸೂದೆಯ ಮಂಡನೆಯೊಂದಿಗೆ ಸಾಮಾಜಿಕ ಜಾಲತಾಣಗಳ ಎದುರಾಗುವ ಅಪಾಯಗಳಿಂದ ಮಕ್ಕಳನ್ನು ರಕ್ಷಿಸಲು ಬಿಗಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನದಲ್ಲಿ ಕೆನಡಾ ಕೂಡಾ ಕೈಜೋಡಿಸಿದಂತಾಗಿದೆ.
ಮಕ್ಕಳು ತಮಗೆ ತಾವೇ ಹಾನಿ ಮಾಡಲು ಆಸ್ಪದ ನೀಡುವಂತಹ ಕಂಟೆಂಟ್ಗಳು ಅಥವಾ ಅವರಲ್ಲಿ ಹಿಂಸೆಯನ್ನು ಪ್ರಚೋದಿಸುವ ಕಂಟೆಂಟ್ಗಳು ಹಾಗೂ ದ್ವೇಷದ ಭಾವನೆಯನ್ನು ಬೆಳೆಸುವ ಹಾಗೂ ಸಮ್ಮತಿರಹಿತವಾದ ಲೈಂಗಿಕ ಸಂಪರ್ಕದ ಚಿತ್ರಗಳ ಪ್ರಸಾರ ಸೇರಿದಂತೆ ಏಳು ವಿಧದ ಹಾನಿಕಾರಕ ಕಂಟೆಂಟ್ಗಳನ್ನು ಪ್ರಸಾರ ಮಾಡುವ ಜಾಲತಾಣಗಳಿಗೆ ಈ ಮಸೂದೆ ಅನ್ವಯವಾಗುತ್ತದೆ.
ಈ ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ‘ಕೆನಡಾ ಡಿಜಿಟಲ್ ಸುರಕ್ಷತಾ ಆಯೋಗ’ವನ್ನು ಸೃಷ್ಟಿಸಲಾಗುವುದು ಎಂದು ಕೆನಡಾದ ಸಾಂಸ್ಕೃತಿಕ ಸಚಿವ ಮಾರ್ಕ್ ಮಿಲ್ಲರ್ ತಿಳಿಸಿದ್ದಾರೆ.
‘‘ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ನಾವು ಸೋಲುತ್ತಿದ್ದೇವೆ. ಇನ್ನು ಸಾಕು. ಮಕ್ಕಳಿಗಾಗಿ ನಾವು ಮೂಲಭೂತ ರಕ್ಷಣೆಯನ್ನು ಜಾರಿಗೆ ತರುವ ಅಗತ್ಯವಿದೆ’’ ಎಂದವರು ಹೇಳಿದ್ದಾರೆ.
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಮಸೂದೆಯನ್ನು ಆಸ್ಟ್ರೇಲಿಯ, ಬ್ರೆಝಿಲ್ ಹಾಗೂ ಇಂಡೊನೇಶಿಯಾ ದೇಶಗಳು ಈಗಾಗಲೇ ಜಾರಿಗೆ ತಂದಿವೆ. ಬ್ರಿಟನ್, ಫ್ರಾನ್ಸ್, ಸ್ಪೇನ್, ಡೆನ್ಮಾರ್ಕ್, ಥೈಲ್ಯಾಂಡ್ ಹಾಗೂ ದಕ್ಷಿಣ ಕೊರಿಯಾ ಕೂಡಾ ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತರಲು ಚಿಂತಿಸುತ್ತಿವೆ.






