ಕೆನಡದ ಕವಯತ್ರಿ ಆ್ಯನೆ ಕಾರ್ಸನ್ ಗೆ ಸಾಹಿತ್ಯ ಕ್ಷೇತ್ರದ ನೊಬೆಲ್

ಆ್ಯನೆ ಕಾರ್ಸನ್ | Photo Credit : AP
ಹೊಸದಿಲ್ಲಿ: ಕೆನಡದ ಖ್ಯಾತ ಕವಯತ್ರಿ ಹಾಗೂ ಬರಹಗಾರ್ತಿ ಆ್ಯನೆ ಕಾರ್ಸನ್ ಅವರಿಗೆ 2026ನೇ ಸಾಲಿನ ನೊಬೆಲ್ ಸಾಹಿತ್ಯ ಪುರಸ್ಕಾರ ದೊರೆತಿದೆ. ಸಮಕಾಲೀನ ಸಾಹಿತ್ಯಕ್ಕೆ ಹೊಸ ರೂಪ ನೀಡಿದ ಹಾಗೂ ಶಾಸ್ತ್ರೀಯ ಸಾಹಿತ್ಯ ಪರಂಪರೆಯೊಂದಿಗೆ ಸಂವಾದ ನಡೆಸುವ ಅವರ ದಿಟ್ಟ ಹಾಗೂ ನವೀನ ಶೈಲಿಯ ಬರವಣಿಗೆಗಾಗಿ ಅವರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ.
ಸ್ವೀಡಿಷ್ ಅಕಾಡೆಮಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯು 12 ಮಿಲಿಯ ಸ್ವೀಡಿಶ್ ಕ್ರೋನ್ (1.2 ಮಿಲಿಯ ಡಾಲರ್) ನಗದು ಹಣವನ್ನು ಒಳಗೊಂಡಿದೆ.
ಕವಿ ಹಾಗೂ ಪ್ರಬಂಧಗಾರ್ತಿಯಾಗಿರುವ ಕಾರ್ಸನ್ ಅವರು, ಸಾಹಿತ್ಯ ಪ್ರಕಾರದ ಸರಹದ್ದುಗಳನ್ನು ಮೀರಿ ತಮ್ಮ ಕೃತಿಗಳಲ್ಲಿ ಪದ್ಯ, ಗದ್ಯ, ಸಂಭಾಷಣೆ ಹಾಗೂ ಭಾಷಾಂತರವನ್ನು ಸಮ್ಮಿಳಿತಗೊಳಿಸುವ ಮೂಲಕ ಗಮನಸೆಳೆದಿದ್ದಾರೆ. ಶಾಸ್ತ್ರೀಯ ಗ್ರೀಕ್ ಸಾಹಿತ್ಯವನ್ನು ಭಾಷಾಂತರಿಸುವ ಮೂಲಕ ಸಾಹಿತ್ಯ ರಂಗದಲ್ಲಿ ಜನಪ್ರಿಯರಾಗಿದ್ದಾರೆ.
1998ರಲ್ಲಿ ಪ್ರಕಟವಾದ ‘ಆಟೋಬಯೋಗ್ರಫಿ ಆಫ್ ರೆಡ್’ನಂತಹ ಕಾವ್ಯಕಾದಂಬರಿಗಳಿಂದ ಹಿಡಿದು ಒಪೆರಾ ಲಿಬರೆಟ್ಟಿಯಂತಹ ಕೃತಿಗಳು ಹಾಗೂ ಸಾಹಿತ್ಯ ವಿಮರ್ಶೆ ಸೇರಿದಂತೆ ವೈವಿಧ್ಯಮಯ ಸಾಹಿತ್ಯವನ್ನು ಅವರು ರಚಿಸಿದ್ದಾರೆ. 2019ರಲ್ಲಿ ಪ್ರಕಟವಾದ ‘ನೊರ್ಮಾ ಜೀನ್ ಬೇಕರ್ ಆಫ್ ಟ್ರಾಯ್’ ಅವರ ವಿಶಿಷ್ಟ ಶೈಲಿಯ ಬರವಣಿಗೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಯೂರಿಪಿಡಸ್ ನ ‘ಹೆಲೆನ್ ಆಫ್ ಟ್ರಾಯ್’ ನಾಟಕದಲ್ಲಿನ ಹೆಲೆನ್ ಪಾತ್ರ ಹಾಗೂ ನಟಿ ಮೆರಿಲಿನ್ ಮನ್ರೋ ಅವರ ಕಥೆಗಳನ್ನು ಈ ಕೃತಿಯಲ್ಲಿ ಸಮ್ಮಿಳಿತಗೊಳಿಸಲಾಗಿದೆ.
ಸ್ವೀಡನ್ ನ ಉದ್ಯಮಿ ಅಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ ಸ್ಥಾಪಿಸಲಾಗಿರುವ ನೊಬೆಲ್ ಪುರಸ್ಕಾರಗಳನ್ನು 1901ರಿಂದ ಸಾಹಿತ್ಯ, ವಿಜ್ಞಾನ ಹಾಗೂ ಶಾಂತಿ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ ನೀಡಲಾಗುತ್ತಿದೆ. ಕಳೆದ ವರ್ಷದ ನೊಬೆಲ್ ಪುರಸ್ಕಾರವನ್ನು ಹಂಗರಿಯ ಸಾಹಿತಿ ಲಾಸ್ಲೋ ಕ್ರಾಸ್ನಹೋರ್ಕೈ ಅವರು ಪಡೆದಿದ್ದರು.






