ನಮ್ಮ ಆರ್ಥಿಕತೆಗೆ ಹೆಚ್ಚಿನ ಅಪಾಯವೆಂದರೆ ಟ್ರಂಪ್: ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ

ಡೊನಾಲ್ಡ್ ಟ್ರಂಪ್ , ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ | PC : NDTV
ವಾಷಿಂಗ್ಟನ್: ಕೆನಡಾದ ಆರ್ಥಿಕತೆಗೆ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತೀ ಹೆಚ್ಚಿನ ಅಪಾಯವಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಹೇಳಿದ್ದಾರೆ.
ಎಪ್ರಿಲ್ 28ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ನಡೆದ ಟಿವಿ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ನೆ `ಈಗ ನಡೆಯುತ್ತಿರುವ ಸುಂಕ ಸಮರದ ಹಿನ್ನೆಲೆಯಲ್ಲಿ ಪ್ರಾಂತಗಳು ಹಾಗೂ ಪ್ರದೇಶಗಳ ನಡುವಿನ ಸಹಕಾರವು ಕೆನಡಾದ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಮಹತ್ವದ್ದಾಗಿದೆ' ಎಂದರು.
ಟ್ರಂಪ್ ತಮ್ಮ ಸುಂಕಗಳಿಂದ ಹಿಂದೆ ಸರಿಯುವ ತನಕ ಅಮೆರಿಕದ ವಿರುದ್ಧದ ಪರಸ್ಪರ ಸುಂಕ ಚಾಲ್ತಿಯಲ್ಲಿರುತ್ತದೆ. ಚುನಾವಣೆಯಲ್ಲಿ ಗೆದ್ದರೆ ತಮ್ಮ ಹೊಸ ಸರಕಾರವು ಆರ್ಥಿಕತೆ ಮತ್ತು ಭದ್ರತೆ ವಿಷಯದಲ್ಲಿ ಅಮೆರಿಕದೊಂದಿಗೆ ಹೊಸ ಸಂಬಂಧವನ್ನು ರೂಪಿಸಿಕೊಳ್ಳುತ್ತದೆ ಎಂದು ಕಾರ್ನೆ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಿದ ಸುಂಕ ಸಮರದ ಪರಿಣಾಮ ಜಾಗತಿಕ ಮಟ್ಟದಲ್ಲಿ ಗೋಚರಿಸುತ್ತಿರುವಂತೆಯೇ, ಅಮೆರಿಕ ಹಾಗೂ ಕೆನಡಾಗಳು ತಮ್ಮ ಸುಂಕಗಳನ್ನು ಕಡಿತಗೊಳಿಸಿ ಹೊಸ ಒಪ್ಪಂದ ಮಾಡಿಕೊಳ್ಳಬೇಕು ಎಂದು ಕೆನಡಾದ ಕನ್ಸರ್ವೇಟಿವ್ ಪಕ್ಷ ಆಗ್ರಹಿಸಿದೆ.





