ಕೆನಡಾದ ಸರಣಿ ಹಂತಕ ರಾಬರ್ಟ್ ಮೇಲೆ ಜೈಲಿನಲ್ಲಿ ಹಲ್ಲೆ: ಸಾವು
ರಾಬರ್ಟ್ ಪಿಕ್ಟನ್ | PC : NDTV
ಒಟ್ಟಾವೊ: ತನ್ನ ಹಂದಿ ಫಾರ್ಮ್ಗೆ ಮಹಿಳೆಯರನ್ನು ಕರೆದೊಯ್ದು ಅವರನ್ನು ಹತ್ಯೆಗೈದು ದೇಹದ ಭಾಗಗಳನ್ನು ಹಂದಿಗಳಿಗೆ ತಿನಿಸುತ್ತಿದ್ದ ಕುಖ್ಯಾತ ಸರಣಿ ನರಹಂತಕ ರಾಬರ್ಟ್ ಪಿಕ್ಟನ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿದ್ದು ಗಂಭೀರ ಗಾಯಗೊಂಡ ರಾಬರ್ಟ್ ಮೃತಪಟ್ಟಿರುವುದಾಗಿ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ವ್ಯಾಂಕೋವರ್ನಲ್ಲಿ 1990ರಿಂದ 2000 ನೇ ಇಸವಿಯ ನಡುವಿನ ಅವಧಿಯಲ್ಲಿ 26 ಮಹಿಳೆಯರನ್ನು (ಹೆಚ್ಚಿನವರು ವೇಶ್ಯೆಯರು) ತನ್ನ ಫಾರ್ಮ್ನಲ್ಲಿ ಹತ್ಯೆ ಮಾಡಿದ ಆರೋಪ ಸಾಬೀತಾಗಿ ರಾಬರ್ಟ್ಗೆ 2007ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈತನ ಹಂದಿ ಫಾರ್ಮ್ನಿಂದ ಖರೀದಿಸಲಾದ ಹಂದಿ ಮಾಂಸದಲ್ಲಿ ಮಾನವನ ಅವಶೇಷಗಳು ಇರಬಹುದು ಎಂದು ಸ್ಥಳೀಯ ಆರೋಗ್ಯ ಇಲಾಖೆ ವರದಿ ನೀಡಿದ ಬಳಿಕ, ವ್ಯಾಂಕೋವರ್ನಲ್ಲಿ ಹಲವಾರು ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ರಾಬರ್ಟ್ನ ಬಗ್ಗೆ ಅನುಮಾನ ಮೂಡಿ ವಿಚಾರಣೆ ನಡೆಸಿದಾಗ ಸರಣಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
74 ವರ್ಷದ ರಾಬರ್ಟ್ ಮೇಲೆ ಮೇ 19ರಂದು ಜೈಲಿನಲ್ಲಿ ಸಹಖೈದಿ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿದ್ದ ರಾಬರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೇ 31ರಂದು ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.