ಬೇಬಿ ಪೌಡರ್ ನಿಂದ ಕ್ಯಾನ್ಸರ್ ಪ್ರಕರಣ : 5.5 ಬಿಲಿಯನ್ ಡಾಲರ್ ಪಾವತಿಗೆ ಜಾನ್ಸನ್ & ಜಾನ್ಸನ್ ಒಪ್ಪಿಗೆ

Photo Credit : johnsonsbaby.in
ವಾಷಿಂಗ್ಟನ್: ತನ್ನ ಬೇಬಿ ಪೌಡರ್ ಹಾಗೂ ಇತರ ಟಾಲ್ಕ್ ಆಧಾರಿತ ಉತ್ಪನ್ನಗಳ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್ ಉಂಟಾಗಿದೆ ಎಂಬ ಆರೋಪದಡಿ ದಾಖಲಿಸಲಾಗಿರುವ ಸಾವಿರಾರು ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು ಜಾನ್ಸನ್ & ಜಾನ್ಸನ್ (ಜೆ&ಜೆ) ಅಂದಾಜು 5.5 ಬಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿದೆ.
ಈ ಒಪ್ಪಂದ ಜಾರಿಗೆ ಬಂದರೆ, ಅಮೆರಿಕದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ಹಾಗೂ ದೀರ್ಘಕಾಲದಿಂದ ಮುಂದುವರಿದಿರುವ ಉತ್ಪನ್ನದಿಂದ ಹಾನಿಯಾಗಿದೆ ಎಂಬ ಆರೋಪದ ಪ್ರಕರಣಗಳಲ್ಲಿ ಒಂದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಸ್ತಾವಿತ ಇತ್ಯರ್ಥವು ಅಮೆರಿಕದ ಫೆಡರಲ್ ಹಾಗೂ ರಾಜ್ಯ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಸುಮಾರು 76,000 ಮೊಕದ್ದಮೆಗಳನ್ನು ಒಳಗೊಂಡಿದೆ. ಇವು ಜೆ&ಜೆ ವಿರುದ್ಧ ಬಾಕಿ ಉಳಿದಿರುವ ಬಹುತೇಕ ಎಲ್ಲಾ ಅಂಡಾಶಯದ ಕ್ಯಾನ್ಸರ್ ಪ್ರಕರಣಗಳಾಗಿವೆ. ಆದರೆ, ಈ ಒಪ್ಪಂದ ಜಾರಿಗೆ ಬರಬೇಕಾದರೆ ಕನಿಷ್ಠ ಶೇ.95ರಷ್ಟು ಹಕ್ಕುದಾರರು ಇದಕ್ಕೆ ಒಪ್ಪಿಗೆ ಸೂಚಿಸಬೇಕಿದೆ.
ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರಿದಿರುವ ಈ ಕಾನೂನು ಹೋರಾಟದಲ್ಲಿ ಅನೇಕ ವಿಚಾರಣೆಗಳು, ಮೇಲ್ಮನವಿಗಳು ಹಾಗೂ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಕಂಪೆನಿ ನಡೆಸಿದ ಮೂರು ದಿವಾಳಿತನದ ಪ್ರಯತ್ನಗಳು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಈಗಿನ ಇತ್ಯರ್ಥವನ್ನು ಪ್ರಕರಣದ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ.
ಟಾಲ್ಕ್ ಆಧಾರಿತ ತನ್ನ ಉತ್ಪನ್ನಗಳು ಸುರಕ್ಷಿತವಾಗಿದ್ದು, ಅವುಗಳಲ್ಲಿ ಆಸ್ಬೆಸ್ಟೋಸ್ ಇಲ್ಲ ಎಂದು ಜೆ&ಜೆ ಆರಂಭದಿಂದಲೂ ಸಮರ್ಥಿಸಿಕೊಂಡಿದೆ. ಈ ಉತ್ಪನ್ನಗಳ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಆರೋಪವನ್ನೂ ಕಂಪೆನಿ ನಿರಂತರವಾಗಿ ತಳ್ಳಿಹಾಕಿದೆ.
ಹಕ್ಕುದಾರರ ಆರೋಪಗಳನ್ನು ಒಪ್ಪಿಕೊಂಡಿರುವ ಕಾರಣಕ್ಕೆ ಅಲ್ಲ, ಹಲವು ವರ್ಷಗಳಿಂದ ಮುಂದುವರಿದಿರುವ ದುಬಾರಿ ಮತ್ತು ಸಂಕೀರ್ಣ ನ್ಯಾಯಾಂಗ ಹೋರಾಟಕ್ಕೆ ತೆರೆ ಎಳೆಯುವ ಉದ್ದೇಶದಿಂದಲೇ ಇತ್ಯರ್ಥಕ್ಕೆ ಮುಂದಾಗಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
‘ಇಲ್ಲಿಯವರೆಗೆ ವಿಚಾರಣೆಗೆ ಬಂದ ಹೆಚ್ಚಿನ ಪ್ರಕರಣಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಮುಂದಿನ ಪ್ರಕರಣಗಳಲ್ಲಿಯೂ ಜಯಗಳಿಸುತ್ತೇವೆ ಎಂಬ ವಿಶ್ವಾಸವಿದೆ. ಆದರೂ, ಈ ಇತ್ಯರ್ಥದಿಂದ ಈ ವಿವಾದವನ್ನು ಹಿಂದೆ ಬಿಟ್ಟು ಜೀವ ರಕ್ಷಕ ಔಷಧಗಳು ಹಾಗೂ ವೈದ್ಯಕೀಯ ಸಾಧನಗಳ ಅಭಿವೃದ್ಧಿಯತ್ತ ಗಮನಹರಿಸಲು ಸಾಧ್ಯವಾಗುತ್ತದೆ’ ಎಂದು ಜೆ&ಜೆ ಮೊಕದ್ದಮೆ ವಿಭಾಗದ ಉಪಾಧ್ಯಕ್ಷ ಎರಿಕ್ ಹಾಸ್ ಹೇಳಿದ್ದಾರೆ ಎಂದು ರಾಯಿಟರ್ಸ್ ಉಲ್ಲೇಖಿಸಿದೆ.
ಒಪ್ಪಂದದ ಪ್ರಕಾರ, 2027ರಲ್ಲಿ ಸುಮಾರು 3 ಬಿಲಿಯನ್ ಡಾಲರ್ ಪಾವತಿಸುವ ನಿರೀಕ್ಷೆಯಿದ್ದು, ಉಳಿದ ಮೊತ್ತವನ್ನು 2028ರಲ್ಲಿ ಪಾವತಿಸಲಾಗುತ್ತದೆ. ಆದರೆ, ಅಂತಿಮ ಇತ್ಯರ್ಥದ ಮೊತ್ತ ಇನ್ನೂ ನಿಗದಿಯಾಗಿಲ್ಲ.
ಸಾವಿರಾರು ವಾದಿಗಳನ್ನು ಪ್ರತಿನಿಧಿಸುತ್ತಿರುವ ಪ್ರಮುಖ ವಕೀಲ ಕ್ರಿಸ್ ಸೀಗರ್ ಅವರ ಪ್ರಕಾರ, ಇತ್ಯರ್ಥದಲ್ಲಿ ಭಾಗವಹಿಸುವ ಅರ್ಹ ಹಕ್ಕುದಾರರ ಸಂಖ್ಯೆಯನ್ನು ಅವಲಂಬಿಸಿ ಜೆ&ಜೆ ಪಾವತಿಸಬೇಕಾಗುವ ಅಂತಿಮ ಮೊತ್ತ 7 ಬಿಲಿಯನ್ ಡಾಲರ್ಗೂ ಅಧಿಕವಾಗುವ ಸಾಧ್ಯತೆ ಇದೆ.
ಜೆ&ಜೆ ಬೇಬಿ ಪೌಡರ್ ಹಾಗೂ ಇತರ ಟಾಲ್ಕ್ ಆಧಾರಿತ ಉತ್ಪನ್ನಗಳನ್ನು ಹಲವು ವರ್ಷಗಳ ಕಾಲ ಬಳಸಿದ ಪರಿಣಾಮ ಮಹಿಳೆಯರಿಗೆ ಅಂಡಾಶಯದ ಕ್ಯಾನ್ಸರ್ ಉಂಟಾಗಿದೆ ಎಂದು ಮೊಕದ್ದಮೆಗಳಲ್ಲಿ ಆರೋಪಿಸಲಾಗಿದೆ. ಟಾಲ್ಕ್ನಲ್ಲಿ ಕ್ಯಾನ್ಸರ್ ಉಂಟುಮಾಡುವ ಕಲ್ನಾರು (ಆಸ್ಬೆಸ್ಟೋಸ್) ಇತ್ತು ಎಂದು ಹಲವರು ವಾದಿಸಿದ್ದಾರೆ.
ಈ ಎರಡೂ ಆರೋಪಗಳನ್ನು ಕಂಪೆನಿ ನಿರಂತರವಾಗಿ ತಳ್ಳಿಹಾಕಿದ್ದು, ತನ್ನ ಉತ್ಪನ್ನಗಳ ಸುರಕ್ಷತೆಯನ್ನು ದಶಕಗಳ ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ ಎಂದು ಹೇಳಿದೆ. 2020ರಲ್ಲಿ ಅಮೆರಿಕದಲ್ಲಿ ಟಾಲ್ಕ್ ಆಧಾರಿತ ಜಾನ್ಸನ್ ಬೇಬಿ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿ, ಅದರ ಬದಲಿಗೆ ಕಾರ್ನ್ಸ್ಟಾರ್ಚ್ ಆಧಾರಿತ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಈ ಇತ್ಯರ್ಥವು ಈಗಾಗಲೇ ದಾಖಲಾಗಿರುವ ಬಹುತೇಕ ಎಲ್ಲಾ ಅಂಡಾಶಯದ ಕ್ಯಾನ್ಸರ್ ಪ್ರಕರಣಗಳಿಗೆ ಅನ್ವಯಿಸಲಿದೆ. ಆದರೆ, ಇದು ಅಸ್ತಿತ್ವದಲ್ಲಿರುವ ಮೊಕದ್ದಮೆಗಳಿಗೆ ಮಾತ್ರ ಸೀಮಿತವಾಗಿದ್ದು, ಭವಿಷ್ಯದಲ್ಲಿ ಹೊಸ ಹಕ್ಕುದಾರರು ಪ್ರಕರಣ ದಾಖಲಿಸುವ ಹಕ್ಕಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ.
ರಾಯಿಟರ್ಸ್ ವರದಿ ಪ್ರಕಾರ, ಭವಿಷ್ಯದ ಹಕ್ಕುಗಳನ್ನು ಈ ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡುವುದರಿಂದ ಅಸ್ತಿತ್ವದಲ್ಲಿರುವ ವಾದಿಗಳಿಗೆ ಹೆಚ್ಚಿನ ಪರಿಹಾರ ಮೊತ್ತ ಹಂಚಿಕೆ ಮಾಡಲು ಅವಕಾಶ ದೊರೆಯಲಿದೆ. ಅಲ್ಲದೆ, ಪರಿಹಾರ ಮೊತ್ತವನ್ನು ಒಂದು ದಶಕದ ಅವಧಿಯಲ್ಲಿ ಪಾವತಿಸುವ ಬದಲು, ಸುಮಾರು 18 ತಿಂಗಳೊಳಗೆ ವಿತರಿಸುವ ಉದ್ದೇಶ ಹೊಂದಲಾಗಿದೆ.
ಇತ್ಯರ್ಥಕ್ಕೆ ಮುಂದಾಗುವ ಮೊದಲು, ನಡೆದ ಹಲವು ವಿಚಾರಣೆಗಳಲ್ಲಿ ಜೆ&ಜೆಗೆ ಅನುಕೂಲಕರ ತೀರ್ಪುಗಳು ಬಂದಿದ್ದವು. ಕೆಲವು ಮೊಕದ್ದಮೆ ಹೂಡಿದವರ ಪರ ವಕೀಲರನ್ನು ನ್ಯಾಯಾಲಯ ಅನರ್ಹಗೊಳಿಸಿತ್ತು. ಅಲ್ಲದೆ, ಮೊಕದ್ದಮೆ ಹೂಡಿದವರು ಮಂಡಿಸಬಹುದಾದ ಕೆಲವು ವೈಜ್ಞಾನಿಕ ಸಾಕ್ಷ್ಯಗಳ ಬಳಕೆಯನ್ನೂ ನಿರ್ಬಂಧಿಸಿತ್ತು.
ಕಳೆದ ವಾರ ಫೆಡರಲ್ ನ್ಯಾಯಾಧೀಶರೊಬ್ಬರು, ಟಾಲ್ಕ್ ಬಳಕೆಯೇ ಅಂಡಾಶಯದ ಕ್ಯಾನ್ಸರ್ಗೆ ನೇರ ಕಾರಣ ಎಂಬುದನ್ನು ಮೊಕದ್ದಮೆ ಹೂಡಿದವರು ಸಾಬೀತುಪಡಿಸಬಹುದೇ ಎಂಬ ಪ್ರಶ್ನೆ ಎತ್ತಿದ್ದರು. ಈ ಬೆಳವಣಿಗೆ ಜೆ&ಜೆಗೆ ನ್ಯಾಯಾಂಗದಲ್ಲಿ ಅನುಕೂಲಕರವಾಗಿ ಪರಿಣಮಿಸಿತ್ತು ಎಂದು ರಾಯಿಟರ್ಸ್ ವರದಿ ಹೇಳಿದೆ. ಆದರೂ, ಹಲವು ವರ್ಷಗಳಿಂದ ಮುಂದುವರಿದಿರುವ ಕಾನೂನು ಹೋರಾಟಕ್ಕೆ ತೆರೆ ಎಳೆಯುವ ಉದ್ದೇಶದಿಂದ ಕಂಪೆನಿ ಸಮಗ್ರ ಇತ್ಯರ್ಥಕ್ಕೆ ಮುಂದಾಗಿದೆ.
ಈ ಪ್ರಕರಣದಲ್ಲಿ ಹೆಚ್ಚು ವಿವಾದಕ್ಕೀಡಾದ ಅಂಶವೆಂದರೆ 'ಟೆಕ್ಸಾಸ್ ಎರಡು-ಹಂತ' (Texas Two-Step) ಎಂಬ ಕಾನೂನು ತಂತ್ರ. ಇದರಡಿ, ಟಾಲ್ಕ್ ಸಂಬಂಧಿತ ಎಲ್ಲಾ ಹಕ್ಕುಗಳನ್ನು ಒಂದೇ ಇತ್ಯರ್ಥ ಪ್ರಕ್ರಿಯೆಗೆ ಒಳಪಡಿಸುವ ಉದ್ದೇಶದಿಂದ ಜೆ&ಜೆ ಹೊಸ ಅಂಗಸಂಸ್ಥೆಯೊಂದನ್ನು ಸ್ಥಾಪಿಸಿ, ಅದರ ಮೂಲಕ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಆರ್ಥಿಕವಾಗಿ ಸದೃಢವಾಗಿರುವ ಕಂಪೆನಿ ತನ್ನ ಹೊಣೆಗಾರಿಕೆಯನ್ನು ಮಿತಿಗೊಳಿಸಲು ದಿವಾಳಿತನದ ಕಾನೂನುಗಳನ್ನು ಬಳಸುತ್ತಿದೆ ಎಂದು ವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಂತಿಮವಾಗಿ ನ್ಯಾಯಾಲಯಗಳು ಕಂಪೆನಿಯ ಮೂರು ದಿವಾಳಿತನ ಅರ್ಜಿಗಳನ್ನೂ ತಿರಸ್ಕರಿಸಿದವು. ಇದರಿಂದ 2025ರ ಮಾರ್ಚ್ ನಲ್ಲಿ ಪ್ರಕರಣಗಳ ವಿಚಾರಣೆ ಮತ್ತೆ ಆರಂಭವಾಗಿತ್ತು.
ಈಗ ಇತ್ಯರ್ಥದ ಪ್ರಸ್ತಾವವನ್ನು ಹಕ್ಕುದಾರರ ಅನುಮೋದನೆಗೆ ಕಳುಹಿಸಲಾಗುತ್ತಿದೆ. ಸುಮಾರು 76,000 ಅರ್ಹ ಹಕ್ಕುದಾರರಲ್ಲಿ ಕನಿಷ್ಠ ಶೇ.95ರಷ್ಟು ಮಂದಿ ಒಪ್ಪಿಗೆ ಸೂಚಿಸಿದರೆ, ಅಮೆರಿಕದ ಕಾರ್ಪೊರೇಟ್ ಇತಿಹಾಸದಲ್ಲಿನ ಅತಿದೊಡ್ಡ ಉತ್ಪನ್ನ ಹೊಣೆಗಾರಿಕೆ ವಿವಾದಗಳಲ್ಲಿ ಒಂದಕ್ಕೆ ಜೆ&ಜೆ ಅಂತಿಮ ತೆರೆ ಎಳೆಯಲಿದೆ. ಅಗತ್ಯ ಪ್ರಮಾಣದ ಒಪ್ಪಿಗೆ ದೊರೆಯದಿದ್ದರೆ, ಕಂಪೆನಿಯು ಮತ್ತೆ ಹಲವು ವರ್ಷಗಳ ಕಾಲ ಅಮೆರಿಕದ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮುಂದುವರಿಸಬೇಕಾಗುವ ಸಾಧ್ಯತೆ ಇದೆ.






