ಬೆದರಿಸಿ ಇರಾನ್ ಅನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ: ಪೆಜೆಶ್ಕಿಯನ್
ನಾಗರಿಕ ಮೂಲಸೌಕರ್ಯ, ಆಹಾರ, ಜೀವನೋಪಾಯದ ಮೂಲಗಳ ಮೇಲೆ ದಾಳಿ ಆರೋಪ

ಮಸೌದ್ ಪೆಜೆಶ್ಕಿಯನ್ | Photo Credit : PTI
ಹೊಸದಿಲ್ಲಿ: ‘ಜನರನ್ನು ಬೆದರಿಸುವ ಮೂಲಕ ಇರಾನ್ ಅನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ. ಇರಾನ್ ಶರಣಾಗುವುದಿಲ್ಲ’ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಶನಿವಾರ ಹೇಳಿದ್ದಾರೆ.
ಇರಾನ್ ನ ಮಿಲಿಟರಿ ಪಡೆಗಳನ್ನು ಎದುರಿಸುವ ಬದಲು ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಹಾಗೂ ಜನರ ಜೀವನೋಪಾಯದ ಮೂಲಗಳನ್ನು ಅಮೆರಿಕ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ನಾಗರಿಕ ನೆಲೆಗಳ ಮೇಲಿನ ಅಮೆರಿಕದ ದಾಳಿಯನ್ನು ಅವರು ಖಂಡಿಸಿದ್ದಾರೆ.
‘ಅಮೆರಿಕನ್ನರು ನಿಜವಾದ ಯೋಧರಾಗಿದ್ದರೆ, ನಮ್ಮ ಶೌರ್ಯದ ಮಿಲಿಟರಿ ಪಡೆಗಳನ್ನು ಎದುರಿಸಲಿ. ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜೀವನೋಪಾಯದ ಮೇಲೆ ಏಕೆ ಯುದ್ಧ ಸಾರುತ್ತಾರೆ? ಅವರು ಮಾನವರಾಗಿದ್ದರೆ, ಜನರಿಗೆ ನೀರು, ಆಹಾರ ಮತ್ತು ಔಷಧ ಸಿಗದಂತೆ ಏಕೆ ತಡೆಯುತ್ತಾರೆ? ನಮ್ಮ ಜನರನ್ನು ಬೆದರಿಸಿ ಶರಣಾಗುವಂತೆ ಮಾಡಲು ಸಾಧ್ಯವಿಲ್ಲ. ಇರಾನ್ ಶರಣಾಗುವುದಿಲ್ಲ’ ಎಂದು ಪೆಜೆಶ್ಕಿಯನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿರುವ ಪೆಜೆಶ್ಕಿಯನ್, ‘India Today’ ನಡೆಸಿದ ವಿಶೇಷ ಸಂದರ್ಶನದಲ್ಲಿ ಇರಾನ್ನ ಪರಮಾಣು ಕಾರ್ಯಕ್ರಮ ಮತ್ತು ಅಮೆರಿಕದೊಂದಿಗಿನ ಮಾತುಕತೆ ಕುರಿತು ಮಾತನಾಡಿದ್ದಾರೆ.
ಪರಮಾಣು ಶಸ್ತ್ರಾಸ್ತ್ರದ ಆರೋಪ ನಿರಾಕರಣೆ :
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಪೆಜೆಶ್ಕಿಯನ್ ತಳ್ಳಿಹಾಕಿದ್ದಾರೆ. ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತಾದ ಆರೋಪಗಳನ್ನು ಮಿಲಿಟರಿ ಕ್ರಮಕ್ಕೆ ನೆಪವಾಗಿ ಅಮೆರಿಕ ಮತ್ತು ಇಸ್ರೇಲ್ ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇರಾನ್ ನ ಪರಮಾಣು ಚಟುವಟಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ನಿಯಮಗಳ ಚೌಕಟ್ಟಿನಲ್ಲೇ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಇರಾನ್ ‘ಪರಮಾಣು ಪ್ರಸರಣ ತಡೆ ಒಪ್ಪಂದ’ದ (NPT) ಸದಸ್ಯ ರಾಷ್ಟ್ರವಾಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
‘ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಯಸಿದ್ದರೆ, NPTಯ ಸದಸ್ಯರಾಗಿರುತ್ತಿರಲಿಲ್ಲ. ಈಗ ಅವರು ನಮ್ಮ ಭೂಪ್ರದೇಶದ ಮೇಲೆ ದಾಳಿ ಮಾಡಲು ನೆಪಗಳನ್ನು ಹುಡುಕುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಇರಾನ್ ನ ಪರಮಾಣು ಕಾರ್ಯಕ್ರಮವು ವ್ಯಾಪಕ ಅಂತರರಾಷ್ಟ್ರೀಯ ಮೇಲ್ವಿಚಾರಣೆಗೆ ಒಳಪಟ್ಟಿದೆ. NPT ಚೌಕಟ್ಟಿನೊಳಗೆ ಪರಮಾಣು ವಿಷಯಗಳ ಕುರಿತು ಮಾತುಕತೆ ನಡೆಸಲು ಟೆಹ್ರಾನ್ ಸಿದ್ಧವಿದೆ ಎಂದು ಪೆಜೆಶ್ಕಿಯನ್ ತಿಳಿಸಿದ್ದಾರೆ.
‘ಅವರು ಪ್ರತಿದಿನ ಇರಾನ್ ನ ಪರಮಾಣು ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸುತ್ತಾರೆ. ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ನಾವು ಅಂತರರಾಷ್ಟ್ರೀಯ ತತ್ವಗಳ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾಡಿದ್ದೇವೆ ಮತ್ತು ಕಾರ್ಯನಿರ್ವಹಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಇರಾನ್ ನ ಪರಮಾಣು ಮಹತ್ವಾಕಾಂಕ್ಷೆಗಳ ಕುರಿತು ವಾಷಿಂಗ್ಟನ್ ಮತ್ತು ಟೆಲ್ ಅವಿವ್ ಮಾಡುತ್ತಿರುವ ಆರೋಪಗಳಿಗೆ ಯಾವ ನಿರ್ದಿಷ್ಟ ಸಾಕ್ಷ್ಯಗಳಿವೆ ಎಂದು ಪೆಜೆಶ್ಕಿಯನ್ ಪ್ರಶ್ನಿಸಿದ್ದಾರೆ. ಈ ಆರೋಪಗಳನ್ನು ಉದ್ದೇಶಪೂರ್ವಕ ಪ್ರಚಾರ ಎಂದು ಅವರು ಬಣ್ಣಿಸಿದ್ದಾರೆ.
ಖಾಮಿನೈ ಹತ್ಯೆಯ ಬಳಿಕ ನೇರ ಮಾತುಕತೆ ಕಷ್ಟ :
ಪರಮಾಣು ವಿಷಯದಲ್ಲಿ ಮಾತುಕತೆಗಳನ್ನು ಪುನರಾರಂಭಿಸಲು ಟೆಹ್ರಾನ್ ಸಿದ್ಧವಿದೆ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. ಆದರೆ, ಅಮೆರಿಕದೊಂದಿಗೆ ತಕ್ಷಣವೇ ನೇರ ಮಾತುಕತೆಗೆ ಮರಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ. ಉಭಯ ದೇಶಗಳ ನಡುವೆ ನಂಬಿಕೆಯ ಕೊರತೆ ಉಂಟಾಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 28ರಂದು ಆರಂಭವಾದ ಯುದ್ಧದ ಮೊದಲ ದಿನ ಇರಾನ್ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಯಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನೇರ ಮಾತುಕತೆ ನಡೆಸುವುದು ವಿಶೇಷವಾಗಿ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.
‘ಯಾವ ಆಧಾರದ ಮೇಲೆ ಅವರು ನಮ್ಮ ನಾಯಕರನ್ನು ಬಲಿತೆಗೆದುಕೊಂಡರು? ಇದು ನಮ್ಮ ಸಮಾಜಕ್ಕೆ ಬಹಳ ಕಷ್ಟಕರವಾದ ವಿಷಯ’ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.
ಖಾಮಿನೈ ಅವರ ಹತ್ಯೆಯ ಬಳಿಕ ಇರಾನ್ ಸಮಾಜವು ತಕ್ಷಣವೇ ಅಮೆರಿಕದೊಂದಿಗೆ ನೇರ ಮಾತುಕತೆಗೆ ಮರಳುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ಟ್ರಂಪ್ ಅವರೊಂದಿಗೆ ನೇರ ಮಾತುಕತೆಗೆ ಟೆಹ್ರಾನ್ ಒಪ್ಪುತ್ತದೆಯೇ ಎಂಬ ಪ್ರಶ್ನೆಗೆ, ಇರಾನ್ ಅಂತಹ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.
ನಂತರದ ದಿನಗಳಲ್ಲಿ ಟೆಹ್ರಾನ್ ಅಮೆರಿಕದೊಂದಿಗೆ ತಿಳುವಳಿಕೆಗೆ ಬಂದಿತ್ತು ಮತ್ತು ತಿಳುವಳಿಕೆಯ ಒಪ್ಪಂದಕ್ಕೆ (MoU) ಸಹಿ ಹಾಕಿತ್ತು. ಆದರೆ, ವಾಷಿಂಗ್ಟನ್ ಬಳಿಕ ಆ ಒಪ್ಪಂದದಿಂದ ಹಿಂದೆ ಸರಿಯಿತು ಎಂದು ಅವರು ಆರೋಪಿಸಿದ್ದಾರೆ.
ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಅಮೆರಿಕವು ಇರಾನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂಬುದು ತಮ್ಮ ದೇಶದ ನಿಲುವು ಎಂದು ಅವರು ಹೇಳಿದ್ದಾರೆ.
‘ಇಸ್ರೇಲ್ ಪರಮಾಣು ಕಾರ್ಯಕ್ರಮ ಏಕೆ ಪರಿಶೀಲನೆಯಲ್ಲಿಲ್ಲ?’ :
ಇಸ್ರೇಲ್ NPTಯ ಸದಸ್ಯ ರಾಷ್ಟ್ರವಲ್ಲ ಎಂಬುದನ್ನು ಉಲ್ಲೇಖಿಸಿದ ಪೆಜೆಶ್ಕಿಯನ್, ಇಸ್ರೇಲ್ ನ ಪರಮಾಣು ಸಾಮರ್ಥ್ಯಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪರಿಶೀಲನೆಯ ಪ್ರಮಾಣದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ಇಸ್ರೇಲ್ ನ ನೀತಿಗಳ ವಿರುದ್ಧ ಇರಾನ್ ಹೊಂದಿರುವ ವಿರೋಧ ಮತ್ತು ಫೆಲೆಸ್ತೀನಿಯರಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ನೆಪವಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಟೆಹ್ರಾನ್ ವಿರುದ್ಧ ಮಿಲಿಟರಿ ಕ್ರಮಕ್ಕೆ ಮುಂದಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಗಾಝಾ ಮತ್ತು ಲೆಬನಾನ್ ನಲ್ಲಿ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಕ್ರಮಗಳನ್ನು ಪೆಜೆಶ್ಕಿಯನ್ ಖಂಡಿಸಿದ್ದಾರೆ. ನಾಗರಿಕರ ಹತ್ಯೆ ಮತ್ತು ಅಗತ್ಯ ಸರಕುಗಳ ಪೂರೈಕೆಗೆ ಅಡ್ಡಿಪಡಿಸುತ್ತಿರುವುದಕ್ಕಾಗಿ ಎರಡೂ ದೇಶಗಳನ್ನು ಅವರು ಟೀಕಿಸಿದ್ದಾರೆ.
ಈ ಪರಿಸ್ಥಿತಿಯ ಕುರಿತು ಅಂತರರಾಷ್ಟ್ರೀಯ ಸಮುದಾಯ ಮೌನ ವಹಿಸಿರುವುದನ್ನೂ ಅವರು ಟೀಕಿಸಿದ್ದಾರೆ.
ಪ್ರಾದೇಶಿಕ ಭದ್ರತಾ ಚೌಕಟ್ಟಿಗೆ ಕರೆ :
ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಸಾಮಾನ್ಯ ಚೌಕಟ್ಟೊಂದನ್ನು ರೂಪಿಸಲು ಇರಾನ್, ಸೌದಿ ಅರೇಬಿಯಾ, ತುರ್ಕಿಯೆ, ಪಾಕಿಸ್ತಾನ ಹಾಗೂ ಈ ಪ್ರದೇಶದ ಇತರ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪೆಜೆಶ್ಕಿಯನ್ ಕರೆ ನೀಡಿದ್ದಾರೆ.
‘ಈ ಪ್ರದೇಶದಲ್ಲಿ ಸಂಘರ್ಷಕ್ಕೆ ಯಾವುದೇ ಕಾರಣವಿಲ್ಲ’ ಎಂದು ಅವರು ಹೇಳಿದ್ದಾರೆ.
ಶತಮಾನಗಳ ಸಂಘರ್ಷದ ಬಳಿಕ ಯುರೋಪಿಯನ್ ರಾಷ್ಟ್ರಗಳು ಸಹಕಾರ ವ್ಯವಸ್ಥೆಗಳನ್ನು ರೂಪಿಸಿಕೊಂಡಿರುವಂತೆಯೇ ಮಧ್ಯಪ್ರಾಚ್ಯದ ದೇಶಗಳೂ ಸಹಕಾರಕ್ಕಾಗಿ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾಮಾನ್ಯ ಪ್ರಾದೇಶಿಕ ಭದ್ರತಾ ಚೌಕಟ್ಟಿನಡಿ ಸಹಕರಿಸುವುದರ ಜತೆಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಮೂಲಕ ದೇಶಗಳು ತಮ್ಮ ವೈಯಕ್ತಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇರಾನ್ ಮತ್ತು ನೆರೆಯ ದೇಶಗಳ ನಡುವಿನ ದೀರ್ಘಕಾಲದ ವ್ಯಾಪಾರ ಹಾಗೂ ಸಾಮಾಜಿಕ ಸಂಬಂಧಗಳನ್ನು ಉಲ್ಲೇಖಿಸಿದ ಪೆಜೆಶ್ಕಿಯನ್, ಇರಾನ್ ಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಜತೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
UAE ಸೇರಿದಂತೆ ಇತರ ಪ್ರಾದೇಶಿಕ ದೇಶಗಳನ್ನು ಅವರು ‘ಸಹೋದರರು’ ಎಂದು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.






