ಕಾರು ಪಾರ್ಕಿಂಗ್ ಗಾಗಿ ಮರ ಕಡಿಯಲು ಸಾಧ್ಯವಿಲ್ಲ, ನಾವು ಪ್ರಕೃತಿಯೊಂದಿಗೆ ಜೀವಿಸುವುದನ್ನು ಕಲಿಯಬೇಕು: ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ (PTI)
ಹೊಸದಿಲ್ಲಿ: ಖಾಸಗಿ ಜಮೀನುಗಳ ವಸತಿ ಕಾಲನಿಗಳಲ್ಲಿನ ಮರಗಳನ್ನು ಕಡಿಯಲು ಅನುಮತಿ ನೀಡಿರುವುದಕ್ಕೆ ದಿಲ್ಲಿ ನ್ಯಾಯಾಲಯವು ಆಕ್ಷೇಪಿಸಿರುವ ಘಟನೆ ಗುರುವಾರ ನಡೆದಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಸಂತ್ ವಿಹಾರ ಪ್ರದೇಶದಲ್ಲಿ ಮರಗಳನ್ನು ಕಡಿದಿರುವ ಕುರಿತು ಅಧಿಕಾರಿಯು ನಿರ್ಲಕ್ಷ್ಯ ತೋರಿದ್ದಾರೆ ಎಂದು ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಜಸ್ಮೀತ್ ಸಿಂಗ್, “ನಾವು ಪ್ರಕೃತಿಯೊಂದಿಗೆ ಜೀವಿಸುವುದನ್ನು ಕಲಿಯಬೇಕಿದೆ. ಕೇವಲ ಕಾರ್ ನಿಲುಗಡೆ ಮಾಡಲು ಅಥವಾ ಸ್ವತ್ತಿನ ಮೌಲ್ಯವನ್ನು ಏರಿಕೆ ಮಾಡಲು ಮರವನ್ನು ಕಡಿಯಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
“ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಮರ ಕಡಿತಕ್ಕೆ ಅನುಮತಿಯನ್ನು ನಿರಾಕರಿಸುವ ಹಕ್ಕು ಮತ್ತು ಅಧಿಕಾರ ನಿಮ್ಮ ವ್ಯಾಪ್ತಿಯೊಳಗಿದೆ” ಎಂದು ನ್ಯಾಯಾಲಯವು ಸದರಿ ಅರಣ್ಯ ಇಲಾಖೆಯ ಅಧಿಕಾರಿಗೆ ನೆನಪಿಸಿತು ಹಾಗೂ ಪ್ರಶ್ನೆಗೀಡಾಗಿರುವ ಜಮೀನುಗಳ ವ್ಯಾಪ್ತಿಯಲ್ಲಿನ ಮರಗಳ ಇರುವಿಕೆಯನ್ನು ಗಣನೆಗೆ ತೆಗೆದುಕೊಂಡಿರುವ ಎಷ್ಟು ಯೋಜನಾ ಮಂಜೂರಾತಿ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ದಿಲ್ಲಿ ಮಹಾನಗರ ಪಾಲಿಕೆಗೆ ಸೂಚಿಸಿತು.
ಅಧಿಕಾರಿಯು ಅಕ್ಟೋಬರ್ 31ರಂದು ಹೊರಡಿಸಿರುವ ತಮ್ಮ ಇತ್ತೀಚಿನ ಆದೇಶದಲ್ಲಿ ವಸಂತ ವಿಹಾರ್ ಪ್ರದೇಶದಲ್ಲಿ ಕಡಿಯಲಾಗಿರುವ 17 ಮರಗಳಿಗೆ ಪ್ರತಿಯಾಗಿ ತಪ್ಪೆಸಗಿದ ಮಾಲಕರಿಗೆ ರೂ. 10.4 ಲಕ್ಷ ದಂಡ ವಿಧಿಸಿ ಮರ ಕಡಿತವನ್ನು ಸಕ್ರಮಗೊಳಿಸಿರುವ ಕುರಿತು ನ್ಯಾಯಾಲಯವು ವಿಚಲಿತಗೊಂಡಿತು. ಅಧಿಕಾರಿ ಪರ ಹಾಜರಿದ್ದ ವಕೀಲರು, ಅಧಿಕಾರಿಯು ಉರುಳಿಸಿರುವ ಮರಗಳ ಬದಲಿಗೆ 190 ಸಸಿಗಳನ್ನು ನೆಡುವಂತೆ ದಿಲ್ಲಿ ಮಹಾನಗರ ಪಾಲಿಕೆಗೆ ಪ್ರಾಮಾಣಿಕವಾಗಿ ಸೂಚಿಸಿದ್ದರು ಹಾಗೂ ಆ ಸಸಿಗಳು ಸ್ಥಳೀಯ ಪ್ರಭೇದವಾಗಿರಬೇಕು ಮತ್ತು ಅವುಗಳನ್ನು ವಸಂತ ವಿಹಾರ ಪ್ರದೇಶದಲ್ಲಿ ನೆಡಬೇಕು ಎಂದು ಸ್ಪಷ್ಟಪಡಿಸಿದ್ದರು ಎಂಬ ಸಂಗತಿಯನ್ನು ನ್ಯಾಯಾಲಯಕ್ಕೆ ತಿಳಿಸಿದರು.
“ಆದರೆ, ಆ ಜಮೀನುಗಳಿಗೆ ಹೊಂದಿಕೊಂಡಿರುವ ಮರಗಳನ್ನು ಏಕೆ ಕಡಿಯಬೇಕು” ಎಂದು ನ್ಯಾಯಾಲಯವು ಅಚ್ಚರಿ ವ್ಯಕ್ತಪಡಿಸಿದೆ.
“9 ಬೃಹತ್ ಮರಗಳನ್ನು ಏಕೆ ಕಡಿಯಬೇಕು ಎಂಬುದು ನಿಮಗೆ ತಿಳಿಯದಿದ್ದರೆ, ನಿಮ್ಮ ಕಚೇರಿಯನ್ನು ಮುಚ್ಚಿ. ಒಂಬತ್ತು ದುಷ್ಕರ್ಮಿಗಳು ಬಂದು ಖಾಸಗಿ ಸ್ವತ್ತಿನಲ್ಲಿರುವ ಮರಗಳನ್ನು ಕಡಿದರೆ? ನಿಮ್ಮದೊಂದು ನಿಷ್ಕ್ರಿಯ ಸಂಸ್ಥೆಯಾಗಿದೆ. ಇಂತಹ ಅಸೂಕ್ಷ್ಮ, ದೇಶಾವರಿ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು.
ವಸತಿ ಪ್ರದೇಶಗಳಲ್ಲಿನ ಮರಗಳನ್ನು ಕೆಡವಲು ಅಧಿಕಾರಿಗಳು ಯಾಂತ್ರಿಕವಾಗಿ ಅನುಮತಿ ನೀಡಬಾರದು ಎಂಬ ನ್ಯಾಯಾಲಯದ ಈ ಹಿಂದಿನ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಸಂಜೀವ್ ಬಗಾಯ್ ಎಂಬವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿತ್ತು. ಒಂದು ವೇಳೆ ಹೀಗೆ ಮರ ಕಡಿಯುವುದನ್ನು ಸಕ್ರಮಗೊಳಿಸಿದರೆ, ನಿಯಮಗಳನ್ನು ಉಲ್ಲಂಘಿಸಲು ಕಟ್ಟಡ ನಿರ್ಮಾಣಕಾರರನ್ನು ಉತ್ತೇಜಿಸಿದಂತಾಗುತ್ತದೆ ಎಂದು ಅವರು ವಕೀಲೆ ಅನು ಮೋಂಗಾ ಮೂಲಕ ವಾದ ಮಂಡಿಸಿದರು.







