ಕದನ ವಿರಾಮ ವಿಸ್ತರಣೆ; ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಟ್ರಂಪ್ ಆದೇಶ

PC:PTI
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಇರಾನ್ ಮೇಲೆ ದಿಗ್ಬಂಧನವನ್ನು ಮುಂದುವರಿಸಲು ಅವರು ಮಿಲಿಟರಿಗೆ ನಿರ್ದೇಶನ ನೀಡಿದ್ದಾರೆ.
ಟ್ರುತ್ ಸೋಶಿಯಲ್ ನಲ್ಲಿ ನೀಡಿದ ಹೇಳಿಕೆಯಲ್ಲಿ ಅವರು, “ಇರಾನ್ ಸರ್ಕಾರವು ಗಂಭೀರವಾಗಿ ದುರ್ಬಲಗೊಂಡಿದೆ ಎಂಬ ಅಂಶವನ್ನು ಪರಿಗಣಿಸಿ, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಪ್ರಧಾನಿ ಶಹಬಾಝ್ ಶರೀಫ್ ಅವರ ಕೋರಿಕೆಯ ಮೇರೆಗೆ, ಅವರ ನಾಯಕರು ಮತ್ತು ಪ್ರತಿನಿಧಿಗಳು ಸಂಯುಕ್ತ ಪ್ರಸ್ತಾಪವನ್ನು ಮಂಡಿಸುವವರೆಗೆ ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ನಮಗೆ ವಿನಂತಿಸಲಾಗಿದೆ,” ಎಂದು ತಿಳಿಸಿದ್ದಾರೆ.
“ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಸೂಚಿಸಿದ್ದೇನೆ. ಪ್ರಸ್ತಾವನೆ ಸಲ್ಲಿಕೆಯಾಗುವವರೆಗೆ ಹಾಗೂ ಮಾತುಕತೆಗಳು ಮುಗಿಯುವವರೆಗೆ ಕದನ ವಿರಾಮ ವಿಸ್ತರಿಸಲಾಗುತ್ತದೆ,” ಎಂದು ಅವರು ಹೇಳಿದ್ದಾರೆ.
“ನನ್ನ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಪರವಾಗಿ, ಕದನ ವಿರಾಮ ವಿಸ್ತರಣೆಗಾಗಿ ಸಲ್ಲಿಸಿದ ನಮ್ಮ ವಿನಂತಿಯನ್ನು ಸ್ವೀಕರಿಸಿದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು,” ಎಂದು ಶಹಬಾಜ್ ಶರೀಫ್ ಹೇಳಿದ್ದಾರೆ.
“ಇದರಿಂದ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಯಲು ಅವಕಾಶ ಸಿಗಲಿದೆ,” ಎಂದು ಅವರು ತಿಳಿಸಿದ್ದಾರೆ.
“ಸಂಘರ್ಷಕ್ಕೆ ಶಾಶ್ವತ ಅಂತ್ಯ ಕಂಡುಕೊಳ್ಳಲು ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿರುವ ಎರಡನೇ ಸುತ್ತಿನ ಮಾತುಕತೆಯಲ್ಲಿ ಎರಡೂ ದೇಶಗಳಿಗೆ ಕದನ ವಿರಾಮವನ್ನು ಪಾಲಿಸುವುದನ್ನು ಮುಂದುವರಿಸುತ್ತವೆ. ಸಮಗ್ರ ‘ಶಾಂತಿ ಒಪ್ಪಂದ’ ಸಾಧಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ,” ಎಂದು ಅವರು ಹೇಳಿದ್ದಾರೆ.






