ಕದನ ವಿರಾಮ ಉಲ್ಲಂಘನೆ : ದಕ್ಷಿಣ ಗಾಝಾ ಮೇಲೆ ಇಸ್ರೇಲ್ನಿಂದ ವೈಮಾನಿಕ ದಾಳಿ

Photo Credit : NDTV
ಜೆರುಸಲೇಂ, ಅ.19: ದಕ್ಷಿಣ ಗಾಝಾದ ರಫಾ ಹಾಗೂ ಇತರ ಪ್ರದೇಶಗಳಲ್ಲಿ ರವಿವಾರ ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿಯ ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್ನ `ಚಾನೆಲ್ 12' ಸುದ್ದಿವಾಹಿನಿ ವರದಿ ಮಾಡಿದೆ.
ಹಮಾಸ್ ಸದಸ್ಯರೊಂದಿಗೆ ಗುಂಡಿನ ಚಕಮಕಿಯ ಬಳಿಕ ವೈಮಾನಿಕ ದಾಳಿ ನಡೆದಿರುವುದಾಗಿ ವರದಿಯಾಗಿದೆ. ರಫಾದಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಸ್ಫೋಟಿಸಿದಾಗ ಇಸ್ರೇಲ್ ಯೋಧರು ಗಾಯಗೊಂಡಿದ್ದಾರೆ. ಯುದ್ಧದ ಸಂದರ್ಭ ಇಸ್ರೇಲಿ ಸೇನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಸಶಸ್ತ್ರ ಹೋರಾಟಗಾರರ ತಂಡ ರಫಾದಲ್ಲಿ ಉಪಸ್ಥಿತಿ ಮುಂದುವರಿಸಿರುವುದು ಬಿಕ್ಕಟ್ಟಿಗೆ ಮೂಲ ಕಾರಣವಾಗಿದೆ ಎಂದು `ಅಲ್ ಜಝೀರಾ' ವರದಿ ಮಾಡಿದೆ. ಇನ್ನೂ ಇಸ್ರೇಲ್ನ ನಿಯಂತ್ರಣದಲ್ಲಿರುವ ರಫಾ ನಗರದಲ್ಲಿ ಹಮಾಸ್ ಹೋರಾಟಗಾರರು ರಾಕೆಟ್ ಚಾಲಿತ ಗ್ರೆನೇಡ್ಗಳಿಂದ ಇಸ್ರೇಲಿ ಪಡೆಗಳ ಮೇಲೆ ದಾಳಿ ನಡೆಸಿದ ಬಳಿಕ ಎರಡು ವೈಮಾನಿಕ ದಾಳಿ ನಡೆದಿರುವುದಾಗಿ ಮತ್ತೊಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸಿರುವುದಾಗಿ ಹಮಾಸ್ ಆರೋಪಿಸಿದೆ. `ಕದನ ವಿರಾಮ ಒಪ್ಪಂದಕ್ಕೆ ತಮ್ಮದೇ ಸರಕಾರದ ಮಿತ್ರಪಕ್ಷಗಳ ತೀವ್ರ ವಿರೋಧದಿಂದ ಒತ್ತಡಕ್ಕೆ ಒಳಗಾಗಿರುವ ನೆತನ್ಯಾಹು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು ಮಧ್ಯವರ್ತಿಗಳು ಮತ್ತು ಖಾತರಿದಾರ ದೇಶಗಳ ಹೆಗಲಿಗೆ ಜವಾಬ್ದಾರಿ ವರ್ಗಾಯಿಸಲು ಬಯಸಿದ್ದಾರೆ' ಎಂದು ಹಮಾಸ್ನ ಉನ್ನತ ಅಧಿಕಾರಿ ಪ್ರತಿಪಾದಿಸಿದ್ದಾರೆ.





