ಪಾಕ್ ಹಡಗುಗಳಿಗೆ ಭಾರತದ ಬಂದರುಗಳ ಪ್ರವೇಶಕ್ಕೆ ನಿಷೇಧ; ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರದ ಆದೇಶ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪಾಕಿಸ್ತಾನದ ಧ್ವಜ ಹೊಂದಿರುವ ಹಡಗುಗಳು ಭಾರತದ ಬಂದರುಗಳಿಗೆ ಪ್ರವೇಶಿಸುವುದಕ್ಕೆ ಕೇಂದ್ರ ಸರಕಾರ ನಿಷೇಧ ಹೇರಿದೆ.
ಈ ನಿಷೇಧವು ತಕ್ಷಣದಿಂದಲೇ ಜಾರಿಗೆ ಬರಲಿದೆಯೆಂದು ಕೇಂದ್ರ ಬಂದರು ಸಚಿವಾಲಯದ ಹೇಳಿಕೆ ತಿಳಿಸಿದೆ. 1958ರ ವ್ಯಾಪಾರಿ ಹಡಗು ಕಾಯ್ದೆಯ ಸೆಕ್ಷನ್ 411ರ ಸೆಕ್ಷನ್ನಡಿ ಈ ನಿರ್ಬಂಧಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಿ ಆದೇಶ ಹೊರಡಿಸಿದೆ.
ಮುಂದಿನ ಆದೇಶದವರೆಗೆ ಈ ನೋಟಿಸ್ ಜಾರಿಯಲ್ಲಿರುತ್ತದೆ. ಭಾರತದ ಸಮುದ್ರಯಾನ ಹಿತಾಸಕ್ತಿಗಳ ಸುಗಮ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಲು ಹಾಗೂ ಭದ್ರತೆಯನ್ನು ಬಲಪಡಿಸುವ ಭಾಗವಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಬಂದರು ಸಚಿವಾಲಯದ ಹೇಳಿಕೆ ತಿಳಿಸಿದೆ.
ಪಾಕಿಸ್ತಾನದ ಧ್ಜಜ ಹೊಂದಿರುವ ಯಾವುದೇ ಹಡಗು ಯಾವುದೇ ಭಾರತೀಯ ಬಂದರನ್ನು ಪ್ರವೇಶಿಸಲು ಅನುಮತಿಯಿರುವುದಿಲ್ಲ ಹಾಗೂ ಯಾವುದೇ ಭಾರತೀಯ ಹಡಗು ಕೂಡಾ ಪಾಕಿಸ್ತಾನದ ಯಾವುದೇ ಬಂದರನ್ನು ಸಂದರ್ಶಿಸಬಾರದು ಎಂದು ಆದೇಶವು ತಿಳಿಸಿದೆ.
ಭಾರತೀಯ ಸೊತ್ತುಗಳು, ಸರಕುಗಳು ಹಾಗೂ ಅಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಹಿತದೃಷ್ಟಿಯಿಂದ ಮತ್ತು ಭಾರತೀಯ ಶಿಪ್ಪಿಂಗ್ ಉದ್ಯಮದ ಧ್ಯೇಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ ಈ ಆದೇಶದಿಂದ ಯಾವುದೇ ರಿಯಾಯಿತಿಯನ್ನು ನೀಡಬೇಕಿದ್ದಲ್ಲಿ, ಅಂತಹ ಸಂದರ್ಭಗಳಲ್ಲಿ ಆಯಾ ಪ್ರಕರಣಕ್ಕನುಗುಣವಾಗಿ ನಿರ್ಧಾರವನ್ನು ಕೈಗೊಳ್ಳಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ.
ಎಪ್ರಿಲ್ 22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಗೆ 26 ಮಂದಿ ಮೃತಪಟ್ಟ ಘಟನೆಯ ಬಳಿಕ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದರ ವಿರುದ್ಧ ಭಾರತವು ಆ ದೇಶದ ವಿರುದ್ಧ ಸರಣಿ ನಿರ್ಬಂಧ ಕ್ರಮಗಳನ್ನು ಘೋಷಿಸಿದೆ.







