‘ಎಕ್ಸ್’ ಸಿಇಒ ಹುದ್ದೆ ತೊರೆದ ಲಿಂಡಾ ಯಾಕಾರಿನೊ

Photo : Reuters
ಹೊಸದಿಲ್ಲಿ: ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ‘ಎಕ್ಸ್’ನ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್’ ನ ಸಿಇಒ ಆಗಿ ಲಿಂಡಾ ಅವರು ಎರಡು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.
2023ರ ಜೂನ್ ನಲ್ಲಿ ಟ್ವಿಟರ್ನ ಸಿಇಒ ಆಗಿ ಲಿಂಡಾ ಯಾಕಾರಿನೊ ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಅವರು, 2011ರಿಂದಲೂ ಎನ್ ಬಿ ಸಿ ಯೂನಿವರ್ಸಲ್ ನ ಜಾಹೀರಾತು ಮತ್ತು ಪಾಲುದಾರಿಕೆ ವಿಭಾಗದ ಕಾರ್ಯ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಟ್ವಿಟರ್ ಖರೀದಿಸಿದ್ದ ಮಸ್ಕ್, ಸಿಇಒ ಆಗಿದ್ದ ಭಾರತದ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿ ತಾವೇ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಆರು ವಾರಗಳ ಬಳಿಕ ಲಿಂಡಾ ಸಿಇಒ ಆಗಿ ಅಧಿಕಾರ ಸ್ವೀಕರಿದ್ದರು.
ರಾಜೀನಾಮೆಯ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಲಿಂಡಾ ಅವರು, ‘ಇದೊಂದು ಜೀವಮಾನದ ಅವಕಾಶ. ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ, ಕಂಪೆನಿಯನ್ನು ಪುನರುಜ್ಜೀವನಗೊಳಿಸುವ, ‘ಎಕ್ಸ್’ ಅನ್ನು ‘ಎವೆರಿಥಿಂಗ್ ಅಪ್ಲಿಕೇಶನ್’ ಆಗಿ ಅಭಿವೃದ್ಧಿಪಡಿಸಲು ಅವಕಾಶ ನೀಡಿದ್ದಕ್ಕಾಗಿ ಎಲಾನ್ ಮಸ್ಕ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.





