ಅಮೆರಿಕ ಪ್ರಜೆಗಳಿಗೆ ವೀಸಾ ಅಮಾನತು: ಚಾಡ್ ಘೋಷಣೆ
ಚಾಡ್ ನ ನಾಗರಿಕರಿಗೆ ಅಮೆರಿಕ ಪ್ರವೇಶ ನಿಷೇಧಿಸಿದ ಟ್ರಂಪ್ ಗೆ ತಿರುಗೇಟು

ಸಾಂದರ್ಭಿಕ ಚಿತ್ರ
ಎನ್ಡಿಜಮೇನಾ: ಚಾಡ್ ದೇಶದ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡಿರುವುದನ್ನು ನಿಷೇಧಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರಕ್ಕೆ ಪ್ರತಿಯಾಗಿ ಅಮೆರಿಕ ಪ್ರಜೆಗಳಿಗೆ ವೀಸಾ ನೀಡುವುದನ್ನು ಅಮಾನತುಗೊಳಿಸುವುದಾಗಿ ಚಾಡ್ನ ಅಧ್ಯಕ್ಷ ಮಹಮತ್ ಇದ್ರಿಸ್ ಡೆಬಿ ಘೋಷಿಸಿದ್ದಾರೆ.
ಚಾಡ್ ಸೇರಿದಂತೆ 12 ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಿರುವುದಾಗಿ ಬುಧವಾರ ಟ್ರಂಪ್ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ `ಪರಸ್ಪರ ಸಂಬಂಧದ ತತ್ವಗಳಿಗೆ' ಅನುಗುಣವಾಗಿ ಅಮೆರಿಕನ್ ನಾಗರಿಕರಿಗೆ ವೀಸಾಗಳನ್ನು ಅಮಾನತುಗೊಳಿಸುವಂತೆ ತನ್ನ ಸರ್ಕಾರಕ್ಕೆ ನಿರ್ದೇಶಿಸಿರುವುದಾಗಿ ಇದ್ರಿಸ್ ಡೆಬಿ ಹೇಳಿದ್ದಾರೆ. `ಚಾಡ್ ಬಳಿ ಕೊಡುಗೆಯಾಗಿ ನೀಡಲು ಐಷಾರಾಮಿ ವಿಮಾನಗಳಿಲ್ಲ, ಕೋಟ್ಯಾಂತರ ಡಾಲರುಗಳಿಲ್ಲ. ಆದರೆ ಚಾಡ್ಗೆ ಅದರದ್ದೇ ಆದ ಘನತೆ ಮತ್ತು ಗೌರವವಿದೆ' ಎಂದವರು, ಟ್ರಂಪ್ಗೆ 400 ದಶಲಕ್ಷ ಡಾಲರ್ ಮೌಲ್ಯದ ಐಷಾರಾಮಿ ವಿಮಾನವನ್ನು ಖತರ್ ಕೊಡುಗೆಯಾಗಿ ನೀಡಿರುವುದನ್ನು ಉಲ್ಲೇಖಿಸಿ ಹೇಳಿದ್ದಾರೆ. ಟ್ರಂಪ್ ಘೋಷಿಸಿರುವ ಪ್ರಯಾಣ ನಿಷೇಧದ ಪಟ್ಟಿಯಲ್ಲಿರುವ 12 ದೇಶಗಳಲ್ಲಿ 7 ಆಫ್ರಿಕಾದ ದೇಶಗಳಾಗಿವೆ.